ಕುದ್ರೋಳಿ ಕ್ಷೇತ್ರದಲ್ಲಿ ಕಲ್ಲಡ್ಕ ಭಟ್ ಗೆ ಮನ್ನಿಸಿ ಎಂದ ಪೂಜಾರಿ
ಮಂಗಳೂರು, ಸೆ. 29: ವೈಭವದ ಕುದ್ರೋಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭಾಗಿಯಾಗಿದ್ದರು. ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು, ಕಾಂಗ್ರೆಸ್ ಸರ್ಕಾರದಿಂದ ಆಗಿರುವ ತೊಂದರೆಗೆ ಕ್ಷಮೆಯಾಚಿಸಿದ ಘಟನೆ ನಡೆಯಿತು.
ಗುರುವಾರ ಸಂಜೆ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪತ್ನಿ ಸಮೇತರಾಗಿ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿದರು.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಲ್ಲಡ್ಕ ಪ್ರಭಾಕರ ಭಟ್ ಕ್ಷೇತ್ರಕ್ಕೆ ಭೇಟಿ ನೀಡಿ ಶಾರದಾ ಮಾತೆ ಸೇರಿದಂತೆ ನವ ದುರ್ಗೆಯರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಂದ ಹಾಗೆ, ಭಟ್ ಕುದ್ರೋಳಿ ಭೇಟಿ ನೀಡುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಪ್ರಭಾಕರ ಭಟ್ ಕ್ಷೇತ್ರಕ್ಕೆ ಬೇಟಿ ನೀಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ನವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಡಾ ಕಲ್ಲಡ್ಕ ಪ್ರಭಾಕರ ಭಟ್ ಬೇಟಿ ನೀಡುತ್ತಾ ಬಂದಿದ್ದಾರೆ.
ಪತ್ನಿ ಡಾ.ಕಮಲಾ ಭಟ್ ಜತೆಗೆ ಗುರುವಾರ ಸಂಜೆ ಕ್ಷೇತ್ರಕ್ಕೆ ಭೇಟಿ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿದರು. ಇದೇ ವೇಳೆ ಕ್ಷೇತ್ರದಲ್ಲೇ ಇದ್ದ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರನ್ನೂ ಭೇಟಿಯಾಗಿ ಕುಶಲ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ, 'ನಮ್ಮವರಿಂದ ತಪ್ಪಾಗಿದೆ, ನಿಮಗೆ ಬಹಳ ತೊಂದರೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ವಿಷಾದ ಸೂಚಿಸಿದರು. ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದ ಅನುದಾನ ಕಡಿತ ವಿಚಾರದಲ್ಲಿ ಪೂಜಾರಿ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.
ಇದೇ ವೇಳೆ ಕುದ್ರೋಳಿ ದಸರಾವನ್ನು ಜನಾರ್ಧನ ಪೂಜಾರಿ ಅವರು ನಡೆಸಿಕೊಂಡು ಬಂದ ರೀತಿಯ ಬಗ್ಗೆ ಪ್ರಭಾಕರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications