ಸುಡುವ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಗೆ ಸಿಕ್ಕಿತು ಮರುಜನ್ಮ!
ಮಂಗಳೂರು, ಸೆಪ್ಟೆಂಬರ್.18: ಬೇಸಿಗೆ ಮುನ್ನವೇ ಬಿಸಿಲ ಝಳ ಕರಾವಳಿಯಲ್ಲಿ ಹೆಚ್ಚುತ್ತಿದೆ. ಮಾರ್ಚ್ ಕೊನೆವಾರದಾಚೆಗೆ ಸುಡುಬಿಸಿಲು ಕಾಣಬೇಕಾದ ಕರಾವಳಿಯಲ್ಲಿ ಮಳೆ ಕಡಿಮೆಯಾಗಿ 20 ದಿನಗಳು ಉರುಳುವ ಮುನ್ನವೇ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ . ಬಿರು ಬಿಸಿಲಿಗೆ ರಸ್ತೆಗೆ ಹಾಕಲಾದ ಡಾಂಬರ್ ಕೂಡ ಕರಗುತ್ತಿದೆ.
ಈ ನಡುವೆ ರಸ್ತೆ ಬದಿಯ ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ.
ಘಟನೆಯ ವಿವರ:
ಮಂಗಳೂರು ನಗರ ಹೊರವಲಯದ ಬಜ್ಪೆ ಬಳಿ ರಸ್ತೆ ಡಾಂಬರೀಕರಣಕ್ಕಾಗಿ ಡಾಂಬರು ಡಬ್ಬಿಗಳನ್ನು ಇಡಲಾಗಿತ್ತು. ಈ ವೇಳೆ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಡಾಂಬರು ಡಬ್ಬಿ ಒಳಗೆ ಬಿದ್ದಿದೆ.

ಬಿಸಿಲಿಗೆ ಕರಗಿದ ಬಿಸಿ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಯ ಮೈ ತುಂಬ ಡಾಂಬರ್ ಅಂಟಿಕೊಂಡಿದೆ. ಅತ್ತ ಹೊರಬರಲಾಗದೇ ಇತ್ತ ಬಿಸಿ ಡಾಂಬರನ್ನು ಸಹಿಸಲಾಗದೇ ನಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು .
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು, ಡಾಂಬರಿನಲ್ಲಿ ಅದ್ದಿ ಹೋಗಿದ್ದ ನಾಯಿಯನ್ನು ಮೇಲೆತ್ತಿದ್ದಾರೆ.

ಕೂಡಲೇ ತಮ್ಮ ಶಕ್ತಿನಗರದ ಅನಿಮಲ್ ಕೇರ್ ಸೆಂಟರಿಗೆ ಕೊಂಡೊಯ್ದು ಸುಮಾರು ಹತ್ತು ಲೀಟರ್‌ನಷ್ಟು ಅಡುಗೆ ಎಣ್ಣೆಯನ್ನು ನಾಯಿಯ ಮೈಗೆ ಸುರಿದಿದ್ದಾರೆ. ನಿಧಾನಕ್ಕೆ

ನಾಯಿ ಮೈಯಲ್ಲಿ ಅಂಟಿದ್ದ ಹತ್ತು ಕೆಜಿಯಷ್ಟು ಡಾಂಬರನ್ನು ಬಟ್ಟೆಯಿಂದ ಉಜ್ಜಿ ತೆಗೆದಿದ್ದಾರೆ. ಸದ್ಯ ನಾಯಿ ಚೇತರಿಕೆ ಕಂಡಿದ್ದು ಮರುಜನ್ಮ ಪಡೆದಂತಾಗಿದೆ.












Click it and Unblock the Notifications