ಕಲ್ಲಡ್ಕ ಭಟ್ರೇ, ಮಂಗಳೂರು ಹಾಳು ಮಾಡಿದ್ದಾಯಿತು, ಬೆಂಗಳೂರಿನವರನ್ನಾದರೂ ನೆಮ್ಮದಿಯಿಂದ ಇರಲು ಬಿಡಿ
ಮಂಗಳೂರು, ಜ 13: ಸಂಘ ಪರಿವಾರ ಆಯೋಜಿಸಿದ್ದ 'ಕನಕಪುರ ಚಲೋ' ಕಾರ್ಯಕ್ರಮದ ಬಗ್ಗೆ ಮಾಜಿ ಸಚಿವ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.
"ಕಲ್ಲಡ್ಕ ಪ್ರಭಾಕರ ಭಟ್ರು ಇಲ್ಲಿಂದ, ಕನಕಪುರಕ್ಕೆ ಹೋಗಿ ಭಾಷಣ ಮಾಡುವ ಅವಶ್ಯಕತೆ ಏನಿತ್ತು" ಎಂದು ಪ್ರಶ್ನಿಸಿರುವ ಖಾದರ್, 'ಇದು ಕಲ್ಲಡ್ಕ ಭಟ್ರ ಸಣ್ಣಬುದ್ದಿಯನ್ನು ತೋರಿಸುತ್ತದೆ" ಎಂದು ಟೀಕಿಸಿದ್ದಾರೆ.
"ಮಂಗಳೂರಿನ ನೆಮ್ಮದಿ ಹಾಳು ಮಾಡಿದ್ದು ಸಾಕು. ಕೊನೆಯ ಪಕ್ಷ, ಕನಕಪುರ ಮತ್ತು ಬೆಂಗಳೂರಿನವರನ್ನಾದರೂ ನೆಮ್ಮದಿಯಿಂದ ಇರಲು ಬಿಡಿ" ಎಂದು, ವ್ಯಂಗ್ಯವಾಗಿ, ಖಾದರ್, ಕಲ್ಲಡ್ಕ ಭಟ್ರಲ್ಲಿ ಮನವಿ ಮಾಡಿದ್ದಾರೆ.

"ನೀವು ಕರಾವಳಿ ಭಾಗದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ, ಆಗಿರುವ ತೊಂದರೆಗಳೇ ಸಾಕು. ಇನ್ನು, ಅಲ್ಲಿಗೆ ಹೋಗಿ ಯಾಕೆ ಅಲ್ಲಿನ ಸಾಮರಸ್ಯ ಹಾಳು ಮಾಡುತ್ತೀರಾ" ಎಂದು ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ರಾಮನಗರದ ಕಪಾಲಿ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಪ್ರತಿಮೆ ನಿರ್ಮಾಣಕ್ಕೆ ಜಾಗ ನೀಡಿದ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಮೇಲೆ ಬಿಜೆಪಿ ನಾಯಕರು ಟೀಕಾ ಪ್ರಹಾರ ನಡೆಸಿದ್ದರು.
ಇದನ್ನು ಪ್ರತಿಭಟಿಸಿ ವಿವಿಧ ಹಿಂದೂಪರ ಸಂಘಟನೆಗಳು, ಜನವರಿ 13ರ ಸೋಮವಾರ 'ಕನಕಪುರ ಚಲೋ' ಕಾರ್ಯಕ್ರಮ ಆಯೋಜಿಸಿದ್ದು. ಇದರಲ್ಲಿ, ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಿದ್ದರು.












Click it and Unblock the Notifications