ದಕ್ಷಿಣ ಕನ್ನಡ: ಹಾಲು ಉತ್ಪಾದಕರಿಗೆ ಬಂಪರ್; ಲೀಟರ್‌ಗೆ 2 ರೂ. ಪ್ರೋತ್ಸಾಹ ಧನ ಹೆಚ್ಚಳ
ಮಂಗಳೂರು, ಅಕ್ಟೋಬರ್ 7: ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರಿಗೆ ಹಾಲು ಉತ್ಪಾದಕರ ಒಕ್ಕೂಟ ಹ ಬಂಪರ್ ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಅಕ್ಟೋಬರ್ 11 ರಿಂದ ಪ್ರತೀ 1 ಲೀಟರ್ ಹಾಲಿಗೆ ಕನಿಷ್ಠ ದರ 32 ರೂ. ಎಂದು ಘೋಷಣೆ ಮಾಡಿದೆ. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಕ್ಕೂಟ ನಿಯಮಿತ ಈ ನಿರ್ಧಾರವನ್ನು ಕೈಗೊಂಡಿದೆ.
ಸರಕಾರದ ಮಾನದಂಡದಂತೆ 3.5 ಫ್ಯಾಟ್ ಹಾಗೂ 8.5 ಎಸ್ಎಸ್ಎಫ್ ಇರುವ ಹಾಲಿಗೆ ಈಗಾಗಲೇ 29.95 ರೂ. ಕೊಡಲಾಗುತ್ತಿತ್ತು. ಅಕ್ಟೋಬರ್ 11ರಿಂದ ಇದಕ್ಕೆ 2.05 ರೂ. ಸೇರಿಸಿ ರೈತರಿಗೆ ಪ್ರೋತ್ಸಾಹ ಧನದ ರೀತಿಯಲ್ಲಿ 32 ರೂ. ಮಾಡಲಾಗುತ್ತದೆ. ಇಷ್ಟರವರೆಗೆ ಹಾಲಿನ ದರವನ್ನು ಏರಿಕೆ ಮಾಡಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಆದರೆ ಹಾಲಿನ ದರವನ್ನು ಹೆಚ್ಚಳ ಮಾಡುವ ಯಾವ ಉದ್ದೇಶವಿಲ್ಲ. ಒಕ್ಕೂಟದಲ್ಲಿರುವ ವ್ಯವಸ್ಥೆಯಿಂದಲೇ ಈ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ದಕ್ಷಿಣ ಕನ್ನಡಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ಸುಚರಿತ ಶೆಟ್ಟಿಯವರು ಹೇಳಿದ್ದಾರೆ.
ಪ್ರತಿ ದಿನ ದಕ್ಷಿಣ ಕನ್ನಡ ಹಾಲು ಉತ್ಪಾದಕರಿಂದ ಪ್ರತಿ ದಿನ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಳೆದ ವರ್ಷ 5.65 ಲಕ್ಷ ಲೀಟರ್ ಪ್ರತಿ ದಿನ ಸಂಗ್ರಹವಾಗುತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆ, ಮೇವಿನ ಕೊರತೆಯಿಂದ ಹಾಲು ಸಂಗ್ರಹದಲ್ಲಿ ವ್ಯತ್ಯಾಸವಾಗಿದೆ. ಈಗ ಜಿಲ್ಲೆಯಲ್ಲಿ 4.65ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಗಾಗಿ ಹೈನುಗಾರರಿಂದ ಖರೀದಿಸುವ ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಿಸುವ ನಿರ್ಧಾರ ಮಾಡಿದ್ದೇವೆ. ಇನ್ನೂ ಪ್ರೋತ್ಸಾಹಧನ ಹೆಚ್ಚಿಸಿರುವ ನಿರ್ಧಾರದಿಂದ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂಗಳಂತೆ ತಿಂಗಳಿಗೆ 3 ಕೋಟಿ ರೂ. ಗಳಷ್ಟು ವೆಚ್ಚವಾಗಲಿದೆ ಸುಚರಿತ ಶೆಟ್ಟಿ ಹೇಳಿದ್ದಾರೆ.

ಪ್ರತಿ ದಿನ 4.65 ಲಕ್ಷ ಲೀಟರ್‌ನಲ್ಲಿ 3.55ಲಕ್ಷ ಲೀಟರ್ ಹಾಲು ಮಾರುಕಟ್ಟೆಗೆ ನೀಡಲಾಗುತ್ತಿದೆ. 60 ಸಾವಿರ ಲೀಟರ್ ಮೊಸರು ಉತ್ಪಾದನೆ ಮಾಡಲಾಗುತ್ತಿದೆ. ಇನ್ನು 60 ಸಾವಿರ ಲೀಟರ್‌ನಲ್ಲಿ ಮಜ್ಜಿಗೆ ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ತಿಂಡಿ, ಪೇಡ ಸೇರಿದಂತೆ 19 ವಿವಿಧ ಹಲವು ಉತ್ಪನ್ನ ಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಸುಚರಿತ ಶೆಟ್ಟಿ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ನಂದಿನಿ ಐಸ್‌ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸುವ ಉದ್ದೇಶವಿದೆ. ಈಗ ನಂದಿನಿ ಬೆಣ್ಣೆಯ ಕೊರತೆ ಎದುರಾಗಿದೆ. ಇದು ತಾತ್ಕಾಲಿಕ ಮಾತ್ರ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ' ಎಂದರು.

ಇನ್ನು ಮುಂದಿನ ವರ್ಷದಿಂದ ಐಸ್ ಕ್ರೀಂ ತಯಾರಿಸುವ ಗುರಿ ಹೊಂದಿದ್ದೇವೆ. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಹೆಣ್ಣು ಮಕ್ಕಳಿಗೆ ಉನ್ನತ ವಿಧ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮಾಡುವ ಗುರಿಯನ್ನು ಹೊಂದಿದ್ದೇವೆ. ಜಿಲ್ಲೆಯ ನಾನಾ ಭಾಗಗಳಿಂದ ಮಂಗಳೂರಿಗೆ ವಿದ್ಯಾರ್ಜನೆಗೆ ಅಥವಾ ವಿಧ್ಯಾಭ್ಯಾಸಕ್ಕಾಗಿ ಬರುವ ಹೆಣ್ಣು ಮಕ್ಕಳಿಗೆ ಅತ್ಯಂತ ಸುರಕ್ಷಿತ, ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡುವ ಗುರಿ ಇದೆ. ಆಹಾರಕ್ಕಾಗಿ ಸಬ್ಸಿಡಿ ರೂಪದಲ್ಲಿ ಹಣ ಪಡೆಯುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications