ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ
ಮಂಗಳೂರು, ಆಗಸ್ಟ್ 28: ಸ್ವಚ್ಛ ಭಾರತ ನಿರ್ಮಲ ಭಾರತ್ ಯೋಜನೆಯಡಿ ಹಲವಾರು ಜಾಗೃತಿ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಲೇ ಇವೆ. ತಕ್ಕಮಟ್ಟಿಗೆ ಇದಕ್ಕೆ ಸ್ಪಂದನೆ ಕೂಡ ದೊರೆತಿದೆ. ಆದರೆ ಸರ್ಕಾರಿ ಸಾರಿಗೆ ಬಸ್ ಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಇನ್ನೂ ಮೂಡಿಲ್ಲ .
ಬಸ್ಸಿನಲ್ಲಿ ಪ್ರಯಾಣಿಕರು ಎಸೆಯುವ ಖಾದ್ಯ ಪದಾರ್ಥಗಳು, ತಿಂಡಿಗಳ ಪ್ಯಾಕೆಟ್ ಗಳು, ಪ್ಲಾಸ್ಟಿಕ್ ಕೈ ಚೀಲಗಳು ಹಾಗೂ ಖಾಲಿ ಬಾಟಲ್ ಗಳು ಬಸ್ಸಿನೊಳಗೆ ಹರಡಿಕೊಂಡು ಪ್ರಯಾಣವೇ ಅಸಹ್ಯ ಎನಿಸುವಷ್ಟು ಪರಿಸ್ಥಿತಿ ಹದಗೆಟ್ಟಿರುತ್ತದೆ.
ಸ್ವಚ್ಛತೆಯ ಬಗ್ಗೆ ಅರಿವಿದ್ದವರು ಕೂಡ ಈ ಪದಾರ್ಥಗಳನ್ನು ಎಸೆಯಲು ಬಸ್ಸಿನೊಳಗೆ ವ್ಯವಸ್ಥೆ ಇಲ್ಲದ ಕಾರಣ ಹೊರಗೆ ಎಸೆಯುತ್ತಾರೆ.

ಬಸ್ಸಿನಲ್ಲಿ ಸ್ವಚ್ಛತೆಗೆ ಪರಿಹಾರ
ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಕಡಿಮೆ ಖರ್ಚಿನಲ್ಲಿ ಡಸ್ಟ್ ಬಿನ್ ಗಳನ್ನು ಸರ್ಕಾರಿ ಬಸ್ ಗಳಲ್ಲಿ ಅಳವಡಿಸಿದರೆ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿತ್ತು.
ಇದೀಗ ಈ ಚಿಂತನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಕಾರಗೊಳಿಸಲಾಗಿದೆ.

ಉಪನ್ಯಾಸಕರ ತಂಡದ ಶ್ರಮ
ಸ್ವಚ್ಛ ಭಾರತ್ ಅಭಿಯಾನದಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅಳವಡಿಸುತ್ತಿದ್ದಾರೆ .
ಡಾ .ಡಿ .ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇದೀಗ ಬಸ್ ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುದನ್ನು ತಡೆಯಲು ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರ ತಂಡ ಪರಿಹಾರ ಹುಡುಕಿದೆ.

ಸರಳ ಕಸದ ಬುಟ್ಟಿ
ಕಡಿಮೆ ಖರ್ಚಿನಲ್ಲಿ ಹಾಗೂ ಅತ್ಯಂತ ಸುಲಭವಾಗಿ ಅಳವಡಿಸಬಲ್ಲ ಕಸದ ಬುಟ್ಟಿ ಯೊಂದನ್ನು ಈ ತಂಡ ತಯಾರಿಸಿದೆ . ಪ್ರಾಯೋಗಿಕವಾಗಿ ದೂರ ದೂರಿಗೆ ಹೋಗುವ ಕರ್ನಾಟಕ ಸಾರಿಗೆ ವೇಗದೂತ ಬಸ್ ನಲ್ಲಿ ಈ ಬುಟ್ಟಿಯನ್ನು ಅಳವಡಿಸಲಾಗಿದೆ .ಪ್ರಯಾಣಿಕರು ಬಸ್ಸಿಗೆ ಹತ್ತುವ ಮೆಟ್ಟಿಲ ಬದಿಯಲ್ಲಿಯೇ ಈ ಬುಟ್ಟಿ ಇಡಲಾಗಿದೆ.

ಡಾ. ಡಿ ವೀರೇಂದ್ರ ಹೆಗ್ಗಡೆ
ಕರ್ನಾಟಕ ರಸ್ತೆ ಸಾರಿಗೆಯ ವೇಗದೂತ ಬಸ್ ಗೆ ಕಸದ ಬುಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ. ಈ ಪ್ರಯೋಗ ಸಫಲವಾದರೆ ಮುಂಬರುವ ದಿನಗಳಲ್ಲಿ ಧರ್ಮಸ್ಥಳಕ್ಕೆ ಬರುವ ಎಲ್ಲ ಸಾರಿಗೆ ಬಸ್ ಗಳಿಗೂ ಈ ಕಸದ ಬುಟ್ಟಿಯನ್ನು ಅಳವಡಿಸುವ ಯೋಜನೆ ಕೂಡ ರೂಪಿಸಲಾಗಿದೆ .











Click it and Unblock the Notifications