ಧರ್ಮಸ್ಥಳದಲ್ಲಿ ಯುವತಿಯರ ಮನಸೆಳೆದ ಬ್ಲಾಕ್ ಮೆಟಲ್ ಆಭರಣಗಳು
ಉಜಿರೆ: ಹೆಣ್ಣು ಆಭರಣ ಪ್ರಿಯೆ. ಸರ, ಬಳೆ, ಓಲೆ, ಉಂಗುರ ಕಾಲ್ಗೆಜ್ಜೆ ಹೀಗೆ ನೂರಾರು ರೀತಿಯ ಆಭರಣಗಳನ್ನು ಖರೀದಿಸಿ ಸಂಭ್ರಮಿಸುವುದರಲ್ಲಿ ಮಹಿಳೆಯರು ಹಿಂದೆ ಉಳಿಯುವ ಮಾತಿಲ್ಲ. ಬದಲಾಗುವ ಟ್ರೆಂಡ್ಗಳ ಜೊತೆ ಜೊತೆಯಲ್ಲಿ ಹೆಣ್ಣುಮಕ್ಕಳ ಆಭರಣದ ಅಭಿರುಚಿಯಲ್ಲೂ ಬದಲಾವಣೆ ಸರ್ವೇ ಸಾಮಾನ್ಯ.
ಪ್ರಸ್ತುತವಾಗಿ ಬಹು ಬೇಡಿಕೆಯಲ್ಲಿರುವ ಬ್ಲಾಕ್ ಮೆಟಲ್ ಆಭರಣಗಳು ಲಕ್ಷದೀಪೋತ್ಸವದಲ್ಲಿ ಮಹಿಳೆಯರ ಗಮನ ಸೆಳೆಯುವುದರಲ್ಲಿ ಮುಂಚೂಣಿಯಲ್ಲಿವೆ.
ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಹೆಣ್ಣುಮಕ್ಕಳ ಅಲಂಕಾರಿಕ ಸಾಮಗ್ರಿಗಳ ಮಾರಾಟ ಭರದಿಂದ ಸಾಗಿದೆ.
ಅದರಲ್ಲೂ ಬೇರೆಲ್ಲ ಆಭರಣಗಳ ಮಧ್ಯೆ ಬ್ಲಾಕ್ ಮೆಟಲ್ ಆಭರಣಗಳು ಹೆಚ್ಚಾಗಿ ಯುವತಿಯರ ಗಮನವನ್ನು ಸೆಳೆಯುವಲ್ಲಿ ಮುಖ್ಯಪಾತ್ರವಹಿಸಿವೆ. ಬ್ಲಾಕ್ ಮೆಟಲ್ ಆಭರಣಗಳ ಒಂದು ವಿಶೇಷತೆ ಎಂದರೆ ಅದು ಸಾಂಪ್ರದಾಯಿಕ ಮತ್ತು ಮಾಡರ್ನ್ ಎರಡೂ ಉಡುಗೆಗಳ ಜೊತೆಗೆ ಸಲೀಸಾಗಿ ಹೊಂದಿಕೊಳ್ಳುತ್ತವೆ.

ಆಭರಣಗಳನ್ನು ರಾಜಸ್ಥಾನದಲ್ಲಿಯೇ ತಯಾರಿಸಲಾಗುತ್ತದೆ, ಕನ್ನಡಿ, ಮಣಿ, ರೇಶ್ಮೆ ದಾರಗಳಿಂದ ತಯಾರಾದ ಆಭರಣಗಳಿಗೆ ಬೇಡಿಕೆ ಕೊಂಚ ಹೆಚ್ಚು. ಬ್ಲಾಕ್ ಮೆಟಲ್ ಆಭರಣಗಳು ಕಳೆಗುಂದುವುದಿಲ್ಲ.

ಅಧಿಕ ವರ್ಷ ಬಾಳಿಕೆಗೆ ಬರುತ್ತವೆ ಮತ್ತು ಕಾಪಾಡಿಕೊಳ್ಳುವುದು ಸುಲಭ. ಕೆಲವೊಂದಿಷ್ಟು ಬಗೆಯ ಆಭರಣಗಳಿಗೆ ಬೆಲೆ ಅಧಿಕ ಎನಿಸಿದರೂ ಗುಣಮಟ್ಟಕ್ಕೆ ಬೆಲೆ ನಿಗದಿಪಡಿಸುವುದು ಅನಿವಾರ್ಯ ಎನಿಸುತ್ತದೆ.
'ಧರ್ಮಸ್ಥಳಕ್ಕೆ ಇದೇ ಮೊದಲಬಾರಿ ಬಂದಿದ್ದೇವೆ. ಆದರೆ ನಮ್ಮ ಬಂಡವಾಳ ಕಡಿಮೆ ಇರುವ ಕಾರಣ ಸ್ವಂತ ಮಳಿಗೆಯನ್ನು ಖರೀದಿಸುವುದು ಕಷ್ಟ. ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ನಡೆಸಬೇಕಾಗುತ್ತದೆ.
ನಮ್ಮಲ್ಲಿನ ಆಭರಣಗಳು ದೀಪೋತ್ಸವದಲ್ಲಿ ಬೇರೆ ಕಡೆ ಕಾಣಸಿಗುವುದಿಲ್ಲ. ಬೆಲೆ ಅಧಿಕವಾಯಿತು ಎಂಬ ಮಾತಿದ್ದರೂ ಗುಣಮಟ್ಟಕ್ಕೆ ಗ್ರಾಹಕರು ಚೌಕಾಸಿ ಮಾಡುವುದಿಲ್ಲ. ವ್ಯಾಪಾರದಲ್ಲಿ ಮಿಶ್ರ ಫಲ ಸಿಗುತ್ತಿದೆ' ಎನ್ನುತ್ತಾರೆ ರಾಜಸ್ಥಾನದ ಪ್ರಮೋದ್‍ಕುಮಾರ್












Click it and Unblock the Notifications