ಮಂಗಳೂರು-ಬೆಂಗಳೂರಿಗೆ ಹೊಸ ರೈಲು ಓಡಿಸಲು ಬೇಡಿಕೆ
ಮಂಗಳೂರು, ಆಗಸ್ಟ್ 16: ಮಂಗಳೂರು ಸೆಂಟ್ರಲ್-ಬೆಂಗಳೂರು ಸಂಪರ್ಕಿಸಲು ಹೊಸ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಈಗಿರುವ ರೈಲುಗಳು ಪ್ರಯಾಣಿಕರ ದಟ್ಟಣೆಯಿಂದ ತುಂಬಿ ಹೋಗಿದ್ದು, ರಜೆ ದಿನಗಳಲ್ಲಿ ಜನರಿಗೆ ಸಮಸ್ಯೆಗಳಾಗುತ್ತಿದೆ ಎಂದು ಹೊಸ ರೈಲು ಓಡಿಸಲು ಬೇಡಿಕೆ ಮಂಡಿಸಲಾಗಿದೆ.
ರಾಜಧಾನಿಯನ್ನು ಕರ್ನಾಟಕದ ಕರಾವಳಿಯಿಂದ ಸಂಪರ್ಕಿಸುವ ಬೆಂಗಳೂರು-ಮಂಗಳೂರು ಸೆಂಟ್ರಲ್ ರೈಲಿಗೆ ಭಾರೀ ಬೇಡಿಕೆ ಇದೆ. ಹಬ್ಬ, ಸಾಲು-ಸಾಲು ರಜೆಗಳು, ಸರ್ಕಾರಿ ರಜೆಗಳ ಸಮಯದಲ್ಲಿ ನೂರಾರು ಜನರು ಟಿಕೆಟ್ ಸಿಗದೆ ಪರದಾಡುವಂತಾಗಿದೆ.

ಮಂಗಳೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಎಲ್ಲಾ ರೈಲುಗಳು ಭರ್ತಿಯಾಗುತ್ತಿವೆ. ಇದೊಂದು ಬಹು ಬೇಡಿಕೆಯ ರೈಲು ಮಾರ್ಗವಾಗಿದೆ. ಆದ್ದರಿಂದ ಉಭಯ ನಗರಗಳನ್ನು ಸಂಪರ್ಕಿಸಲು ಹೊಸ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಅರಸೀಕರೆ ಮೂಲಕ ಸಂಚಾರ ನಡೆಸಲಿ; ಮಂಗಳೂರು ಸೆಂಟ್ರಲ್-ಬೆಂಗಳೂರು ನಡುವಿನ ಹೊಸ ರೈಲು ಅರಸೀಕರೆ ಮೂಲಕ ಸಂಚಾರ ನಡೆಸಬೇಕು. ಇದರಿಂದಾಗಿ ಮಂಗಳೂರು ಮೂಲಕ ಮುಂಬೈ, ದೆಹಲಿಗೆ ಸಂಚಾರ ನಡೆಸುವ ಜನರಿಗೆ ಸಹ ಅನುಕೂಲವಾಗಲಿದೆ ಎಂದು ರೈಲ್ವೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ವಾರದ ಎಲ್ಲಾ ದಿನ ಓಡಾಟ ನಡೆಸುತ್ತಿದೆ. ಆದರೆ ಈ ರೈಲು ಸಂಪೂರ್ಣ ಭರ್ತಿಯಾಗಿರುತ್ತದೆ. ಹಲವಾರು ಜನರಿಗೆ ಸೀಟು ಸಿಗುವುದಿಲ್ಲ. ಬೆಂಗಳೂರು-ಮಂಗಳೂರು ನಡುವೆ ಪ್ರತಿದಿನ 500ಕ್ಕೂ ಅಧಿಕ ಜನರು ಸಂಚಾರ ನಡೆಸುತ್ತಾರೆ. ಆದ್ದರಿಂದ ಹೊಸ ರೈಲಿಗೆ ಬೇಡಿಕೆ ಇದೆ ಎಂದು ವಿವರಣೆ ನೀಡಲಾಗಿದೆ.
ಮಂಗಳೂರು-ಬೆಂಗಳೂರು ರಾತ್ರಿ ರೈಲಿನಲ್ಲಿ ಸಹ ಜನರು ತುಂಬಿ ತುಳುಕುತ್ತಾರೆ. ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ನೇರವಾಗಿ ಸುಮಾರು 30 ಸಾವಿರ ಜನರು ಸಂಚಾರ ನಡೆಸಿದ್ದಾರೆ. ಬಹು ಬೇಡಿಕೆಯ ಮಾರ್ಗದಲ್ಲಿ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಉಭಯ ನಗರಗಳ ನಡುವಿನ ಪ್ರಯಾಣಿಕರ ಸಂಚಾರದ ಮಾಹಿತಿ ಪಡೆದುಕೊಂಡು ಶ್ರೀಕರ ಪುತ್ತೂರು ಎಂಬುವವರು ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು ಏಕೆ ಬೇಕು? ಎಂದು ಇಲಾಖೆಗೆ ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು ಆರಂಭಿಸಿದರೆ ಅದು ಅರಸೀಕೆರೆ ಮೂಲಕ ಸಾಗಬೇಕು. ಆಗ ಅರಸೀಕೆರೆ ಮೂಲಕ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ನೇರವಾಗಿ ಯಾವುದೇ ರೈಲು ಇಲ್ಲ ಶ್ರವಣಬೆಳಗೊಳ ಬದಲು ಅರಸೀಕೆರೆ ಮೂಲಕ ರೈಲುಗಳು ಸಾಗಬೇಕು ಎಂದು ಬೇಡಿಕೆ ಇಡಲಾಗಿದೆ.
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಸಮಿತಿ (ರಿ) ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಕರಾವಳಿ ಭಾಗದ ಹಲವು ರೈಲುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇವುಗಳಲ್ಲಿ ಈಗ ವಾರಕ್ಕೆ 6 ದಿನ ಸಂಚಾರ ನಡೆಸುತ್ತಿರುವ ಮಂಗಳೂರು-ಬೆಂಗಳೂರು ರೈಲನ್ನು ಪ್ರತಿದಿನ ಸಂಚಾರ ನಡೆಸುವಂತೆ ಮಾಡುವುದು ಸಹ ಸೇರಿದೆ.
ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಇತರ ಬೇಡಿಕೆಗಳು
* ಮಂಗಳೂರು ಸೆಂಟ್ರಲ್‌ನಲ್ಲಿ ನಡೆಯುತ್ತಿರುವ ಹೊಸ ಪ್ಲಾಟ್‌ಫಾರ್ಮ್‌ಗಳ ಕಾಮಗಾರಿಯನ್ನು
ತ್ವರಿತವಾಗಿ ಪೂರ್ಣಗೊಳಿಸುವುದು.
* ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಸ್ಟ್ಯಾಬಲಿಂಗ್ ಲೈನ್‌ಗಳನ್ನು ಅಳವಡಿಸುವುದು.
* ಮಂಗಳೂರು ಸೆಂಟ್ರಲ್‌ನಲ್ಲಿರುವ ಬೇ-ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ 9 ಬೋಗಿಗಳ ರೈಲುಗಳನ್ನು ನಿಲ್ಲಿಸುವ ಸಾಮರ್ಥ್ಯವಿದೆ, ಆದರೆ ಅದನ್ನು 16 ಬೋಗಿಗಳ ರೈಲುಗಳು ನಿಲ್ಲಲು ಅನುವು ಮಾಡಿಕೊಡಲು ಪ್ಲಾಟ್‌ಫಾರ್ಮ್‌ನ ಉದ್ದವನ್ನು ಹೆಚ್ಚಿಸುವುದು.
* ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಡುವಿನ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸುವುದು.
* ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣದ ನಂತರ, ಮಂಗಳೂರು ಜಂಕ್ಷನ್‌ನಿಂದ ಹೋಗುವ ಮತ್ತು ಬರುವ ರೈಲು ಸಂಖ್ಯೆ 16575/76 ಮಂಗಳೂರು ಜಂಕ್ಷನ್- ಯಶವಂತಪುರ ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು, ರೈಲು ಸಂಖ್ಯೆ 16539/ 40 ಮಂಗಳೂರು ಜಂಕ್ಷನ್- ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು, ರೈಲು ಸಂಖ್ಯೆ 07377/ 78 ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12133/34 ಮುಂಬೈ ಸಿಎಸ್ಎಂಟಿ-ಮಂಗಳೂರು ಜಂಕ್ಷನ್ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವುದು.
* ಈಗ ವಾರಕ್ಕೆ 6 ದಿನ ಮೈಸೂರು ಮೂಲಕ ಸಂಚರಿಸುತ್ತಿರುವ ಮಂಗಳೂರು-ಬೆಂಗಳೂರು ರೈಲನ್ನು ಪ್ರತಿದಿನ ಸಂಚರಿಸುವಂತೆ ಮಾಡುವುದು.
* ಮೀಟರ್ ಗೇಜ್ ಕಾಲದಲ್ಲಿ ಸಂಚರಿಸುತ್ತಿದ್ದ ಮತ್ತು ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಿದ್ದ ಸುಬ್ರಹ್ಮಣ್ಯ-ಮಂಗಳೂರು ಪ್ಯಾಸೆಂಜರ್ ರೈಲನ್ನು ಪುನರಾರಂಭಿಸುವುದು.












Click it and Unblock the Notifications