Deepavali Special Train: ಹಬ್ಬಕ್ಕೆ ಮಂಗಳೂರು ಕಡೆ ಹೊರಟವರು ಗಮನಿಸಿ, ಇಲ್ಲಿದೆ ವಿಶೇಷ ರೈಲು,ಬಸ್ ವಿವರ
ಮಂಗಳೂರು, ನವೆಂಬರ್ 09: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ಸಂಭ್ರಮವನ್ನು ಅನುಭವಿಸಲು ಊರಿಗೆ ಹೊರಟವರ ಸಂಖ್ಯೆಯೂ ಜಾಸ್ತಿಯಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರಾಜ್ಯದ ಕಡಲನಗರಿ ಮಂಗಳೂರಿನಿಂದ ವಿಶೇಷ ಬಸ್ ಹಾಗೂ ರೈಲು ಹೊರಡಿಸಲು ಆಯಾ ಸಂಸ್ಥೆಗಳು ನಿರ್ಧಾರ ಮಾಡಿದೆ.
ಮಂಗಳೂರಿಗೆ ಬೆಂಗಳೂರು ಮೈಸೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಮೂವತ್ತಕ್ಕೂ ಅಧಿಕ ಬಸ್‌ಗಳನ್ನು ಹೊರಡಿಸಲು ಕೆಎಸ್ಆರ್‌ಟಿಸಿ ಸಿದ್ಧತೆ ನಡೆಸಿದೆ. ಹಬ್ಬದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ಹೊರಡಿಸಲು ನಿರ್ಧಾರ ಮಾಡಿದೆ.

ಹಬ್ಬದ ಆರಂಭದ ದಿನದಲ್ಲಿ ಬೇರೆ ಊರುಗಳಿಂದ ಮಂಗಳೂರಿಗೆ ಹೆಚ್ಚುವರಿ ಬಸ್ ಬಂದರೆ ನವೆಂಬರ್ 13 ಮತ್ತು 14 ರಂದು ಮಂಗಳೂರಿನಿಂದ ಪ್ರಮುಖವಾಗಿ ಮೈಸೂರು, ಬೆಂಗಳೂರು ಸೇರಿದಂತೆ ಇತರ ಭಾಗಗಳಿಗೆ ಹೆಚ್ಚುವರಿ ಬಸ್‌ಗಳು ಪ್ರಯಾಣ ಬೆಳೆಸಲಿದೆ. ಇನ್ನು ರೈಲ್ವೇ ಇಲಾಖೆಯೂ ದೀಪಾವಳಿ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹೆಚ್ಚುವರಿ ರೈಲು ಓಡಿಸಲು ನಿರ್ಧರಿಸಿದೆ.
ನವೆಂಬರ್ ಹತ್ತರಂದು ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ರಾತ್ರಿ 8.30 ಕ್ಕೆ ಹೊರಟು ರಾತ್ರಿ 11.25ಕ್ಕೆ ಬೆಂಗಳೂರು ತಲುಪಿ, ಮಂಗಳೂರನ್ನು ನವೆಂಬರ್11ರಂದು ಬೆಳಗ್ಗೆ 9.40ಕ್ಕೆ ತಲುಪಲಿದೆ. ಇನ್ನು ಇದೇ ರೈಲು ನವೆಂಬರ್14ರಂದು ಸಂಜೆ 5.15ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಟು ಮರುದಿನ ಬೆಳಗ್ಗೆ 3.45ಕ್ಕೆ ಬೆಂಗಳೂರು ತಲುಪಿ, ಬೆಳಗ್ಗೆ 7.30ಕ್ಕೆ ಮೈಸೂರು ತಲುಪಲಿದೆ.

ಈ ರೈಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕಬಕ, ಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕಂಗೇರಿ, ಮಂಡ್ಯದಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ರೈಲಿನಲ್ಲಿ ಜನರಲ್, ಸ್ಲೀಪರ್, 3ಟೈರ್ ಎಸಿ, 2ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕೋಚ್‌ಗಳು ಇರಲಿದೆ. ಹಬ್ಬದ ಸಂಧರ್ಭದಲ್ಲಿ ಬಸ್ ಸಿಗದೇ ಪರದಾಡುವ ಪ್ರಯಾಣಿಕರಿಗೆ ಈ ವಿಶೇಷ ರೈಲು ಅನುಕೂಲ ನೀಡಲಿದೆ..ಈ ರೈಲಿನ ಟಿಕೆಟ್ ಬುಕ್ಕಿಂಗ್ ತೆರೆದಿದ್ದು,ಪ್ರಯಾಣಿಕರು ಉತ್ತಮ ಸ್ಪಂದನೆ ತೋರುತ್ತಿದ್ದಾರೆ.












Click it and Unblock the Notifications