ಹ್ಯಾಕರ್‌ಗಳ ಆಟ-ವಿದೇಶದಲ್ಲಿ ದ.ಕ ಯುವಕನಿಗೆ ಪ್ರಾಣ ಸಂಕಟ: ರಿಯಾದ್‌ನಲ್ಲಿ ಜೈಲುಪಾಲಾದ ಕಡಬದ ಯುವಕ
ಮಂಗಳೂರು, ಆಗಸ್ಟ್ 18: ಜೀವನ ಕಟ್ಟಿಕೊಳ್ಳಲು ವಿದೇಶಕ್ಕೆ ತೆರಳಿ ಇನ್ಯಾರದ್ದೋ ಸಂಚಿಗೆ ಬಲಿಯಾಗಿ ಜೈಲುಪಾಲಾಗಿ ಅಲ್ಲಿಂದ ಹೊರಬರಲಾಗದೆ ನಲುಗುತ್ತಿರುವವರು ಅದೆಷ್ಟೋ ಮಂದಿಯಿದ್ದಾರೆ. ಈ ಪಟ್ಟಿಯಲ್ಲಿ ಈಗ ಕಡಬದ ಯುವಕ ಸೇರ್ಪಡೆಯಾಗಿದ್ದಾನೆ. ಈತನ ಮನೆಯವರೀಗ ಈ ಯುವಕನನ್ನು ಜೈಲಿನಿಂದ ಬಿಡುಗಡೆ ಮಾಡಲು ಪರದಾಡುತ್ತಿದ್ದಾರೆ.
ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ ಯುವಕ ರಿಯಾದ್ ನಲ್ಲಿ ಅಲ್ಫಾನರ್ ಸೆರಾಮಿಕ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಹ್ಯಾಕರ್‌ಗಳ ಸಂಚಿನ ಸುಳಿಗೆ ಬಲಿಯಾಗಿ 2022ರ ನವೆಂಬರ್‌ನಿಂದ ರಿಯಾದ್‌ನ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಹಾಗೂ ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಹೋಗಿದ್ದಾರೆ. ಅಲ್ಲಿ 2 ಬಾರಿ ತಂಬ್ ಪಡೆಯಲಾಗಿದ್ದು, ವಾರದ ಬಳಿಕ ಅರೆಬಿಕ್ ಭಾಷೆಯಲ್ಲೊಂದು ಸಂದೇಶ ಬರುತ್ತದೆ. ಅದನ್ನು ಚಂದ್ರಶೇಖರ್ ಕ್ಲಿಕ್ ಮಾಡಿದ್ದು, 2 ದಿನಗಳ ಬಳಿಕ ದೂರವಾಣಿ ಕರೆ ಬಂದಿದೆ. ಸಿಮ್ ಮಾಹಿತಿ ಕೇಳಿ ಒಟಿಪಿ ಸಂಖ್ಯೆ ಪಡೆದಿದ್ದಾರೆ. ಆದರೆ ಒಂದು ವಾರದ ಬಳಿಕ ಏನೂ ಮಾಹಿತಿ ನೀಡದೆ ಅವರನ್ನು ರಿಯಾದ್ ಪೊಲೀಸರು ಬಂಧಿಸಿ ಜೈಲಿಗಟ್ಟುತ್ತಾರೆ.
ಆ ಬಳಿಕ ತಿಳಿದದ್ದೇನೆಂದರೆ, ಚಂದ್ರಶೇಖರ್‌ಗೆ ತಿಳಿಯದೆ ರಿಯಾದ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಆ ಖಾತೆಗೆ ರಿಯಾದ್ ಮಹಿಳೆಯೊಬ್ಬರ 22 ಸಾವಿರ ರಿಯಲ್ ಹಣ ಜಮೆಯಾಗಿದೆ. ಅದು ಇನ್ನಾವುದೋ ದೇಶಕ್ಕೆ ವರ್ಗಾವಣೆಯಾಗಿದೆ. ಆಕೆ ನೀಡಿರುವ ದೂರಿನಂತೆ ಚಂದ್ರಶೇಖರರನ್ನು ಬಂಧಿಸಲಾಗಿದೆ. ಜೈಲುಪಾಲಾದ ಅವರ ಬಿಡುಗಡೆಗೆ ರಿಯಾದ್ ವಕೀಲರ ಮೂಲಕ ಬಿಡುಗಡೆಗೆ ಪ್ರಯತ್ನಪಟ್ಟರೂ 10 ಲಕ್ಷ ರೂಪಾಯಿ ಖರ್ಚಾಗಿದೆಯೇ ವಿನಃ ಬೇರಾವುದೇ ಫಲಿತಾಂಶ ದೊರಕಿಲ್ಲ.
ಅಲ್ಪಾನರ್ ಸೆರಾಮಿಕ್ಸ್ ಕಂಪೆನಿಯೂ ಕೈಚೆಲ್ಲಿ ಕುಳಿತಿದೆ. ಊರಿನಲ್ಲಿರುವ ತಾಯಿಗೆ ಮಗನನ್ನು ಯಾವ ರೀತಿ ಬಿಡುಗಡೆ ಮಾಡಿಸಬೇಕೆಂದು ಗೊತ್ತಿಲ್ಲ. ಆಕೆ ಕಂಗಾಲಾಗಿದ್ದು, ಕೊನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ಮೂಲಕ ಬಿಡಿಸುವ ಪ್ರಯತ್ನವೂ ಸಫಲವಾಗಿಲ್ಲ ಎನ್ನಲಾಗಿದೆ. ಇದೀಗ ಚಂದ್ರಶೇಖರ್ 22 ಸಾವಿರ ರಿಯಲ್ ಮಹಿಳೆಗೆ ನೀಡಬೇಕು. ಇಲ್ಲ ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕು ಎಂದು ಅಲ್ಲಿನ ನ್ಯಾಯಾಲಯ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ತಾನು ಮಾಡದ ತಪ್ಪಿಗೆ ಜೈಲುಪಾಲಾಗುತ್ತಿರುವ ಚಂದ್ರಶೇಖರ್ ಬಿಡುಗಡೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜೈಶಂಕರ್ ಅವರಿಗೆ ಪತ್ರ ಬರೆಯುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಹಿತಚಿಂತಕರು ಚಂದ್ರಶೇಖರ್ ಬಿಡುಗಡೆಗೆ ಸಹಾಯ ಯಾಚಿಸಿ ಮಾಧ್ಯಮದ ಮುಂದೆ ಬಂದಿದ್ದಾರೆ. ಜನವರಿಯಲ್ಲಿ ಮದುವೆಯಾಗಬೇಕಿದ್ದ ಚಂದ್ರಶೇಖರ್ ಜೈಲಿನಲ್ಲಿ ನಲುಗುತ್ತಿದ್ದಾರೆ. ಇನ್ನಾದರೂ ಅವರ ಬಿಡುಗಡೆಗೆ ವಿದೇಶಾಂಗ ಸಚಿವಾಲಯ, ಪ್ರಧಾನಿ ಕಚೇರಿ ಏನು ಮಾಡುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications