ಯುವ ವಕೀಲನ ಮೇಲೆ ದೌರ್ಜನ್ಯ ಆರೋಪ: ಪುಂಜಾಲಕಟ್ಟೆ ಎಸ್‌ಐ ಧಿಡೀರ್ ವರ್ಗಾವಣೆ
ಮಂಗಳೂರು, ಡಿಸೆಂಬರ್ 9: ಯುವ ವಕೀಲನ ಮೇಲೆ ದೌರ್ಜನ್ಯ ಎಸಗಿದ ಮೇಲೆ ಆರೋಪದ ಮೇಲೆ ಪೊಲೀಸ್ ಅಧಿಕಾರಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಕೀಲರು ಸಿಡಿದೆದಿದ್ದಾರೆ. ಜಿಲ್ಲೆಯಾದ್ಯಾಂತ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದ ವಕೀಲರು ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ವಕೀಲರ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು ಆಡಳಿತಾತ್ಮಕ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಿದೆ.
ಇತ್ತೀಚಿಗೆ ಬಂಟ್ವಾಳ ತಾಲೂಕಿನ ದೇವಸ್ಯ ಮೂಡೂರು ಗ್ರಾಮದ ವಸಂತ ಗೌಡ ಎನ್ನುವವರು, ತಮ್ಮ ವರ್ಗ ಜಾಗದಲ್ಲಿದ್ದ ಕಬ್ಬಿಣದ ಗೇಟ್ ಅನ್ನು ಯುವ ವಕೀಲ ಕುಲದೀಪ್ ಶೆಟ್ಟಿ ಕದ್ದೊಯ್ದಿದ್ದಾರೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳ್ಳತನದ ಪ್ರಕರಣವನ್ನು ಪುಂಜಾಲಕಟ್ಟೆ ಪೋಲಿಸರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸುತೇಶ್ ನೇತೃತ್ವದ ತಂಡ ಕುಲದೀಪ್ ಶೆಟ್ಟಿ ಮನೆಗೆ ತೆರಳಿ ಕುಲದೀಪ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಈ ವೇಳೆ ಪೊಲೀಸರು ಮತ್ತು ಕುಲದೀಪ್ ನಡುವೆ ವಾಗ್ವಾದ ನಡೆದಿದೆ. ಕುಲದೀಪ್ ನನ್ನು ಅರೆಬೆತ್ತಲಾಗಿ ಪೊಲೀಸ್ ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿ, ಕುಲದೀಪ್ ತಾಯಿ ಪೊಲೀಸ್ ವಾಹನಕ್ಕೆ ಅಡ್ಡ ಹಾಕಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕುಲದೀಪ್ ತಾಯಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ವಿಡಿಯೋವನ್ನು ಕುಲದೀಪ್ ಸಹೋದರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲೆಯ ವಕೀಲ ಸಮೂಹ ಪೊಲೀಸ್ ಅಧಿಕಾರಿ ಸುತೇಶ್ ವಿರುದ್ಧ ತಿರುಗಿ ಬಿದ್ದಿದೆ. ಮಂಗಳೂರು ನ್ಯಾಯಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯದಲ್ಲಿ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಕರಣ ಸಿವಿಲ್ ವಿಚಾರ ಆಗಿರುವುದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಯುವ ವಕೀಲನನ್ನು ಅರೆಬೆತ್ತಲೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ವಕೀಲರ ಒತ್ತಾಯಕ್ಕೆ ಮಣಿದು ಸಬ್ ಇನ್ಸ್‌ಪೆಕ್ಟರ್ ಸುತೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಡಳಿತಾತ್ಮಕ ಕಾರಣ ನೀಡಿ ವರ್ಗಾಯಿಸಿದೆ. ಜಿಲ್ಲೆಯಲ್ಲಿ ಪೊಲೀಸ್ ಮತ್ತು ವಕೀಲರ ನಡುವೆ ಅಸಮಾಧಾನ ಉಂಟು ಮಾಡಿದ್ದ ಈ ಪ್ರಕರಣ ಸದ್ಯ ತಣ್ಣಗಾಗಿದೆ.












Click it and Unblock the Notifications