ಒಂದು ರೂ. ಖರ್ಚು ಮಾಡದೆ ಚುನಾವಣೆ ಗೆದ್ದೆ ಕೋಟ ಶ್ರೀನಿವಾಸ ಪೂಜಾರಿ!
ಮಂಗಳೂರು, ಡಿಸೆಂಬರ್ 14; ನಿರೀಕ್ಷೆಯಂತೇ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತೆ ವಿಧಾನಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ನಾಲ್ಕು ಬಾರಿ ಸೋಲಿಲ್ಲದ ಸರದಾರನಾಗಿ ಮೇಲ್ಮನೆ ಪ್ರವೇಶಿಸಿದ ಕೋಟ ಮೊದಲ ಪ್ರಾಶಸ್ತ್ಯದ ಮತಗಳಿಸಿ ವಿಜಯದ ನಗು ಬೀರಿದ್ದಾರೆ. ಒಂದೇ ಒಂದು ರೂಪಾಯಿ ಖರ್ಚು ಮಾಡದೇ ಜಯಗಳಿಸಿದ ಅಭ್ಯರ್ಥಿ ಅಂತಾ ಕೋಟಾ ಶ್ರೀನಿವಾಸ ಪೂಜಾರಿ ಖುಷಿ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ-ಉಡುಪಿ ದ್ವಿ-ಸದಸ್ಯ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಎರಡು ಜಿಲ್ಲೆಗಳಲ್ಲಿ ಒಟ್ಟು 6,011 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 5,955 ಮತಗಳು ಸಿಂಧುವಾದರೆ 56 ಮತಗಳು ಅಸಿಂಧುವಾಗಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ 3,672 ಮತಗಳನ್ನು ಪಡೆದು ಮೊದಲ ಪ್ರಾಶಸ್ತ್ಯವನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,079 ಮತವನ್ನು ಪಡೆದಿದ್ದಾರೆ. ಇನ್ನು ಎಸ್‌ಡಿಪಿಐ ಅಭ್ಯರ್ಥಿ ಶಾಫಿ.ಕೆ ಬೆಳ್ಳಾರೆ 204 ಮತಗಳನ್ನು ಪಡೆದರು.
ಮಂಗಳೂರಿನ ಪಾಂಡೇಶ್ವರದ ರೊಸಾರಿಯೋ ಪದವಿ ಕಾಲೇಜಿನಲ್ಲಿ ನಡೆದ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬಿಜೆಪಿ ಕಾರ್ಯಕರ್ತರು ಎತ್ತಿ ಸಂಭ್ರಮಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, "ಮತದಾರರಿಗೆ ಹಾಗೂ ಖರ್ಚಿಗೆ ಒಂದೇ ಒಂದು ರೂಪಾಯಿ ಖರ್ಚು ಮಾಡಿದೇ ಗೆದ್ದಂತಹ ಅಭ್ಯರ್ಥಿ ಅಂದರೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಎಂದು ಹೇಳಲು ಸಂತೋಷಪಡುತ್ತೇನೆ" ಎಂದರು.

"ಇದು ನೈಜ ಮತದಾರರ ಗೆಲುವು ಅಂತ ನನಗೆ ಅನಿಸುತ್ತದೆ ಮತ್ತು ಇದು ಬಿಜೆಪಿ ಪಕ್ಷದ ಪ್ರತಿ ಕಾರ್ಯಕರ್ತರ ಶ್ರಮದ ಫಲ ಎಂದು ನಾನು ಭಾವಿಸುತ್ತೇನೆ. ಎರಡು ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರು ಸಂಸದರಿಗೆ ಹಾಗೂ ಸಿಎಂ ಹಾಗೂ ಕಾರ್ಯಕರ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಸಂತೋಷ ವ್ಯಕ್ತಪಡಿಸಿದರು. ಪಂಚಾಯತ್ ರಾಜ್ ಇಲಾಖೆಯ ಸಬಲೀಕರಣಕ್ಕಾಗಿ ನಾನು ದುಡಿಯುತ್ತೇನೆ ಅಂತಾ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
ದಕ್ಷಿಣ ಕನ್ನಡ-ಉಡುಪಿ ದ್ವಿ-ಸದಸ್ಯ ಕ್ಷೇತ್ರವಾದ ಹಿನ್ನಲೆಯಲ್ಲಿ 2,079ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯೂ ಮೇಲ್ಮನೆ ಪ್ರವೇಶಿಸಿದ್ದಾರೆ. ಶಿಕ್ಷಣೋದ್ಯಮಿಯಾಗಿರುವ ಮಂಜುನಾಥ ಭಂಡಾರಿ ಮೊದಲ ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ.
ನಿರೀಕ್ಷಿತ ಗೆಲುವಿನ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ, "ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಟ್ಟ ಕಾಂಗ್ರೆಸ್ಸಿಗೆ ನಮಿಸುತ್ತೇನೆ. ನನಗೆ ಬೆಂಬಲ ಕೊಟ್ಟು ಹಾಗೂ ಮತದಾನ ಮಾಡಿದ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ" ಎಂದರು.

"ಈ ಗೆಲುವು ಕಾಂಗ್ರೆಸ್ ಕಾರ್ಯಕರ್ತರ ಗೆಲುವು ಎಂದು ಸಂತೋಷ ವ್ಯಕ್ತಪಡಿಸಿದರು. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಈ ಮಟ್ಟಕ್ಕೆ ಗುರುತಿಸಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ನಾನು ಅಭಾರಿ. ಇದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಲ್ಲಾ ನಾಯಕರ ಗೆಲುವು" ಎಂದು ಸಂತಸ ವ್ಯಕ್ತಪಡಿಸಿದರು.
ಎಸ್‌ಡಿಪಿಐನ ಅಭ್ಯರ್ಥಿ ಶಾಫಿ ಬೆಳ್ಳಾರೆ ಕೇವಲ 204 ಮತಗಳನ್ನು ಪಡೆದರು.












Click it and Unblock the Notifications