ದೇಶಕ್ಕಾಗಿ ಗಂಡನನ್ನೇ ಅರ್ಪಿಸಿದರೂ ಉದ್ಯೋಗಕ್ಕಾಗಿ ಅಂಗಲಾಚಿದ ಪತ್ನಿ!

ಮಂಗಳೂರು, ಜನವರಿ 23; ದೇಶ ಕಾಯುವ ಯೋಧ, ಜನ್ಮ ಕೊಟ್ಟ ತಾಯಿಯ ಋಣವನ್ನು 7 ಜನ್ಮ ಎತ್ತಿ ಬಂದರೂ ತೀರಿಸಲು ಅಸಾಧ್ಯ ಎನ್ನುವ ಮಾತಿದೆ. ತನ್ನ ಸರ್ವಸ್ವವನ್ನೂ ಧಾರೆಯೆರೆಯುವ, ನಮ್ಮ ನಾಳೆಗಾಗಿ ತನ್ನ ಇಂದಿನ ದಿನವನ್ನು ತ್ಯಾಗ ಮಾಡುವ ಯೋಧ ಕರ್ತವ್ಯದಲ್ಲಿ ವೀರ ಮರಣವನ್ನಪ್ಪುವಾಗ ಅವನ ಸಾವಿಗೆ ಸಮಾಜ ಮಮ್ಮಲ ಮರಗುತ್ತದೆ. ಯೋಧನ ಕುಟುಂಬದ ಜೊತೆ ನಾವೀದ್ದೇವೆ ಎಂಬುದಾಗಿ ಹೇಳುತ್ತದೆ. ಆದರೆ ಯೋಧ ಮರೆಯಾಗಿ ವರ್ಷವಾಗುತ್ತಿದ್ದಂತೆಯೇ ಆತನ ಕುಟುಂಬವನ್ನು ಸಮಾಜ ಮರೆಯುತ್ತದೆ.

ಇದಕ್ಕೊಂದು ತಾಜಾ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಹುತಾತ್ಮ ಸೈನಿಕನ ಪತ್ನಿ. ತನ್ನ ಜೀವನಕ್ಕಾಗಿ ಸಹಾಯ ಮಾಡುವಂತೆ ಸರಕಾರಿ ಕಛೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ. ಭಾರತೀಯ ಅರೆಸೇನಾ ಪಡೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲೇ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ ಪತಿಯಿಂದಾಗಿ ಸಂಕಷ್ಟದಲ್ಲಿರುವ ಯೋಧನ ಪತ್ನಿ ಜಯಂತಿ ಎಂಬುವವರು ಸರಕಾರಿ ಉದ್ಯೋಗ ನೀಡುವಂತೆ ಹಲವು ಮನವಿಗಳನ್ನು ಮಾಡಿದರೂ, ಈವರೆಗೂ ಮನವಿಗೆ ಸ್ಪಂದನೆ ದೊರೆತಿಲ್ಲ.

jayanthi

ಕೈಯಲ್ಲಿ ಸಾಕಷ್ಟು ದಾಖಲೆ ಪತ್ರಗಳನ್ನು ಹಿಡಿದುಕೊಂಡು ಪ್ರತಿ ದಿನವೂ ಸರಕಾರಿ ಕಛೇರಿಗಳಿಗೆ ಅಲೆದಾಡುತ್ತಿರುವ ಜಯಂತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ನಿವಾಸಿ. ಈಕೆಯ ಪತಿ ಸುಬ್ರಹ್ಮಣ್ಯ ನಾಯ್ಕ ಭಾರತೀಯ ಅರೆಸೇನಾ ಪಡೆಯಾದ ಸಿಆರ್‌ಪಿಎಫ್‌ನಲ್ಲಿ 19 ವರ್ಷಗಳ ಸೇವೆ ಸಲ್ಲಿಸಿ, ಕರ್ತವ್ಯದಲ್ಲಿದ್ದ ಸಂದರ್ಭದಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.

1989 ರಂದು ಅರೆ ಸೇನಾಪಡೆಗೆ ಸೇರಿಕೊಂಡಿದ್ದ ಸುಬ್ರಹ್ಮಣ್ಯ ನಾಯ್ಕ 2008ರಲ್ಲಿ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ಶ್ರೀನಗರದಲ್ಲಿ ರೆಡಿಯೋ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಿಆರ್‌ಪಿಎಫ್‌ನಲ್ಲಿ ಎಎಸೈ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಸುಬ್ರಹ್ಮಣ್ಯ ಸಾವಿನ ಬಳಿಕ ಸುಬ್ರಹ್ಮಣ್ಯರ ಪತ್ನಿ ಜಯಂತಿ ಹಲವು ಸಮಸ್ಯೆಗಳ ನಡುವೆ ತನ್ನ ಮಗನನ್ನು ಸಾಕಿ ಸಲಹಿದ್ದು, ಇದೀಗ ಮಗ 8 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಮದುವೆಯಾಗಿ ಎರಡು ವರ್ಷಗಳಲ್ಲೇ ಪತಿಯನ್ನು ಕಳೆದುಕೊಂಡ ಜಯಂತಿ ಈವರೆಗೂ ಸಂಬಂಧಿಕರಲ್ಲಿ ಕಾಡಿಬೇಡಿ ತನ್ನ ಸಂಸಾರವನ್ನು ಸಾಗಿಸಿದ್ದು, ಇದೀಗ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಹಂತಕ್ಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪತಿಯ ಸಾವಿನ ಬಳಿಕ ಅನುಕಂಪದ ಅಧಾರದಲ್ಲಿ ತಮಗೆ ಉದ್ಯೋಗ ನೀಡುವಂತೆ ಸರಕಾರ ಹಾಗೂ ಇಲಾಖೆಗಳಿಗೆ ಮನವಿ ಮಾಡಿ ವರ್ಷಗಳೇ ಕಳೆದಿದ್ದು, ಈ ಮನವಿಗಳಿಗೆ ಯಾವುದೇ ಸ್ಪಂದನೆ ಈ ತನಕವೂ ದೊರೆತಿಲ್ಲ.

subramanaya naik

ಪತಿಯ ಸಾವಿನ ಸಂದರ್ಭದಲ್ಲಿ ಸಿಆರ್‌ಪಿಎಫ್‌ನಲ್ಲಿ ಉದ್ಯೋಗಕ್ಕೆ ಕರೆ ಬಂದಿತ್ತಾದರೂ, ಆ ಸಮಯದಲ್ಲಿ ತುಂಬು ಗರ್ಭಿಣಿಯಾಗಿದ್ದ ಜಯಂತಿ ಕೆಲಸಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಾಗಿತ್ತು. ಬಳಿಕ ಮಗನನ್ನು ಬೆಳೆಸುವ, ಸಂಸಾರ ಸರಿದೂಗಿಸುವ ಜಂಜಾಟದಲ್ಲಿ ಉದ್ಯೋಗದ ಹಿಂದೆ ಹೋಗುವುದೇ ಮರೆತು ಹೋಗಿತ್ತು. ಆದರೆ ಇದೀಗ ಉದ್ಯೋಗವಿಲ್ಲದೆ, ಸಂಸಾರ ಸಾಗಿಸುವುದು ಕಷ್ಟ ಎನ್ನುವ ಹಂತಕ್ಕೆ ತಲುಪಿರುವ ಜಯಂತಿ ತಮಗೊಂದು ಸಣ್ಣ ಉದ್ಯೋಗವನ್ನಾದರೂ ಜಿಲ್ಲೆಯಲ್ಲಿ ನೀಡುವಂತೆ ಕಛೇರಿಯಿಂದ ಕಛೇರಿಗೆ ಅಲೆದು ಮನವಿ ಮಾಡುತ್ತಿದ್ದಾರೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರಿಗೂ ಮನವಿ ಮಾಡಿದ್ದು, ಸಚಿವರು ನೀಡಿದ ಭರವಸೆ ಈಡೇರುವ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಸೈನಿಕನಿಗೆ ಸರಕಾರದ ವತಿಯಿಂದ ನೀಡುವ ಭೂಮಿಯೂ ಯೋಧನ ಪತ್ನಿಗೆ ಜಯಂತಿಗೆ ದೊರೆತಿಲ್ಲದ ಕಾರಣ ಈಗಲೂ ಬಾಡಿಗೆ ಮನೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ಜಯಂತಿ ಪರವಾಗಿ ಇದೀಗ ಮಾಜಿ ಅರೆಸೇನಾ ಪಡೆ ಸಂಘವೂ ಬೆಂಬಲಕ್ಕೆ ನಿಂತಿದ್ದು, ಸರಕಾರ ಕೂಡಲೇ ಈ ವಿಧವೆಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ.

ಒಟ್ಟಿನ್ನಲ್ಲಿ ದೇಶಕ್ಕಾಗಿ ಗಂಡನನ್ನು ತ್ಯಾಗ ಮಾಡಿದ ಪತ್ನಿಗೆ ಈಗ ತನ್ನ ಮುಂದಿನ ಜೀವನಕ್ಕಾಗಿ ಜನಪ್ರತಿನಿಧಿಗಳನ್ನು ಕಾಡಿಬೇಡುವ ಪರಿಸ್ಥಿತಿ ಬಂದಿರೋದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+