ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮೈ ನೇವರಿಸಿದ ಪಿಲಿಚಾಮುಂಡಿ ದೈವ
ಮಂಗಳೂರು, ಫೆಬ್ರವರಿ 07: ತುಳುನಾಡಿನ ಜನ ದೇವರಿಗಿಂತ ಜಾಸ್ತಿ ದೈವಗಳನ್ನು ನಂಬುತ್ತಾರೆ. ಅದಕ್ಕೆ ಕಾರಣ ಈ ಕಲಿಯುಗದಲ್ಲೂ ದೈವಗಳು ತಮ್ಮ ಇರುವಿಕೆಯನ್ನು ,ಕಾರಣಿಕತೆಯನ್ನು ತೋರಿಸುತ್ತಿದೆ. ಈ ದೈವದ ಲೀಲೆಗೆ ಒಳಗಾದವರು ಎಂದೂ ಮತ್ತೆ ದೈವದ ಮೇಲೆ ಅಪನಂಬಿಕೆಯನ್ನು ಬೀರುವುದಿಲ್ಲ.
ಈಗ ಈ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೂ ಸೇರಿದ್ದಾರೆ. ದೈವಾರಾಧನೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಪಿಲಿಚಂಡಿ ದೈವ ಮೈ ನೇವರಿಸಿದೆ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕುಡುಂಬೂರುನಲ್ಲಿ ದೈವ ಪಿಲಿಚಾಮುಂಡಿ ದೈವ ಡಿಸಿ ಮುಲ್ಲೈ ಮುಗಿಲನ್ ಅವರ ಮೈ ನೇವರಿಸಿದೆ.

ಕುಡುಂಬೂರು ಗುತ್ತು ವಂಶಸ್ಥರು ಎಂಟುನೂರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಪಿಲಿಚಾಮುಂಡಿ, ಧೂಮಾವತಿ, ಜಾರಾಂದಾಯ ಮತ್ತು ಮೂಲ ಮೈಸಂದಾಯ ಆದಿ ಶಕ್ತಿಗಳ ಧರ್ಮ ನೇಮ ಕುಡುಂಬೂರಿನಲ್ಲಿ ನಡೆದಿದ್ದು ಈ ಕ್ಷಣಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಾಕ್ಷಿಯಾಗಿದ್ದಾರೆ.
ಕುಡುಂಬೂರು ಈ ಹಿಂದೆ ಸಮೃದ್ಧ ಕೃಷಿ ಸಂಪತ್ತಿನ ಪ್ರದೇಶವಾಗಿದ್ದು, ಕೈಗಾರಿಕಾ ಪ್ರದೇಶವಾದ ಬಳಿಕ ಜನರೆಲ್ಲಾ ಊರು ತೊರೆದಿದ್ದರು. ಆದರೆ ಆ ಮಣ್ಣಿನಲ್ಲಿ ನೆಲೆವೂರಿದ್ದ ಪಂಚ ದೈವಗಳು ಸ್ಥಳಬಿಟ್ಟು ಬರಲು ಒಪ್ಪಲಿಲ್ಲ. ಹೀಗಾಗಿ ಪ್ರತಿವರ್ಷ ಕುಡುಂಬೂರಿನಲ್ಲಿ ಧರ್ಮ ದೈವಗಳಿಗೆ ಧರ್ಮನೇಮ ನಡೆಯುತ್ತಿದೆ. ಈ ಬಾರಿಯ ಧರ್ಮನೇಮಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾಗವಹಿಸಿದ್ದು, ದೈವಾರಾಧನೆಯ ಬಗ್ಗೆ ತುಳು ವಿದ್ವಾಂಸ ದಯಾನಂದ ಜಿ ಕತ್ತಲೆಸಾರ್ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
ತೌಳವ ಸಂಸ್ಕೃತಿಯಲ್ಲಿ ಪ್ರಾಣಿಗಳನ್ನು ದೈವತ್ವಕ್ಕೇರಿಸಿ ಆರಾಧಿಸುವ ಕಲ್ಪನೆಯಿದೆ. ಮೈಸಂದಾಯ, ಪಂಜುರ್ಲಿ, ನಂದಿಗೋಣ, ಪಿಲಿಭೂತ, ಪಿಲಿಚಾಮುಂಡಿ ದೈವಗಳು ಪ್ರಾಣಿ ಮೂಲದ ದೈವಗಳಾಗಿ ಇಂದಿಗೂ ಆರಾಧನೆಗೊಳಪಡುತ್ತಿದೆ. ಪಿಲಿಚಂಡಿ ಹೆಸರಿನಲ್ಲಿ ಪೌರಾಣಿಕ ದೇವತೆ ಚಾಮುಂಡಿಯನ್ನು ಹುಲಿಯೊಂದಿಗೆ ಸಮೀಕರಿಸಿ ಪಿಲಿಚಾಮುಂಡಿ ದೈವದ ಆರಾಧಿಸಲಾಗುತ್ತದೆ.
ತಮ್ಮ ಜಾನುವಾರುಗಳಿಗೆ ಅಪಾಯವನ್ನು ತಂದೊಡ್ಡುವ ಹುಲಿಗಳು ಇತ್ತೀಚಿನ ವರ್ಷಗಳವರೆಗೆ ದಟ್ಟ ಕಾಡುಗಳಿರುವ ತುಳುನಾಡಿನ ಜನತೆಗೆ ಕಾಣಲು ಸಿಗುತ್ತಿತ್ತು. ಈ ಹುಲಿಯ ಭೀತಿಯೇ ಅದರ ಆರಾಧನೆಗೆ ಕಾರಣವಾಗಿದೆ. ಮುಂದೆ ಪೌರಾಣಿಕ ಕಲ್ಪನೆ ಸೇರಿ ಪಿಲಿ ಚಾಮುಂಡಿ ದೈವದ ಆರಾಧನೆಗೆ ಕಾರಣವಾಗಿರಬಹುದು. ಈಗಲೂ ಈ ದೈವ ತನ್ನ ಕಲೆ - ಕಾರ್ಣಿಕದಿಂದ ತುಳುವರಿಂದ ಆರಾಧನೆಗೊಳಗಾಗುತ್ತಿದೆ. ಕುಡುಂಬೂರಿನಲ್ಲೂ ದೈವ ಪಿಲಿಚಾಮುಂಡಿಯನ್ನು ಜನ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದು, ಈ ಬಾರಿ ಜಿಲ್ಲಾಧಿಕಾರಿಯೂ ಭಯ ಭಕ್ತಿಯಿಂದ ದೈವದ ಧರ್ಮದ ನೇಮೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.












Click it and Unblock the Notifications