ಚೈತ್ರಾ ಕುಂದಾಪುರ ಪ್ರಕರಣ ಮೋಸ ಹೋದವರಿಗೂ ಪಾಠ: ಬಿಜೆಪಿ ಮುಖಂಡ ಸಿ.ಟಿ ರವಿ
ಮಂಗಳೂರು, ಸೆಪ್ಟೆಂಬರ್ 16: ಹಣವೇ ಬಿಜೆಪಿಯಲ್ಲಿ ಪ್ರಧಾನವಲ್ಲ. ಹಾಗೊಂದು ವೇಳೆ ಆಗಿದ್ದಲ್ಲಿ ಬೈಂದೂರಿನಲ್ಲಿ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗುತ್ತಿರಲಿಲ್ಲ. ಸುಳ್ಯದಲ್ಲಿ ಬಡ ಮಹಿಳೆ ಭಾಗೀರಥಿ ಮುರುಳ್ಯ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹರು ಮಂತ್ರಿಗಳು ಆಗುತ್ತಿರಲಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೈಂದೂರು ಟಿಕೆಟ್ಗಾಗಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣದ ವಿಚಾರದ ಬಗ್ಗೆ ಮಾತನಾಡಿದ ಅವರು, ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ಧಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಯಾರಿಗೆ ಫೋನ್ ಮಾಡಿದ್ದರೂ ಬಿಜೆಪಿ ನಾಯಕರು ಫೋನ್‌ಗೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರೊಂದಿಗೆ ತುಳುವಲ್ಲೇ ಮಾತನಾಡುತ್ತಿದ್ದರು. ನಳಿನ್, ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ನೇರವಾಗಿ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗಿತ್ತು ಎಂದರು.

ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಬಹಿರಂಗವಾಗಬೇಕು. ಪ್ರಕರಣದ ಹಿಂದೆ ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕಾನೂನು ಕ್ರಮವಾಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಎನ್ನುವುದು ಬೇರೆ. ಈ ಪ್ರಕರಣ ಮೋಸ ಹೋದವರಿಗೂ ಪಾಠವಾಗಲಿ ಎಂದು ಸಿ.ಟಿ ರವಿ ಹೇಳಿದರು.
ಕಾಂಗ್ರೆಸ್ ಬಂದಾಗ ಬರ ಬರುತ್ತದೆ
ಇನ್ನು ಕಾಕತಾಳೀಯವೋ, ಕಾಲ್ಗುಣವೋ ಗೊತ್ತಿಲ್ಲ, ಕಾಂಗ್ರೆಸ್ ಬಂದಾಗ ಬರ ಬರುತ್ತದೆ. ಇದು ಕಾಕತಾಳೀಯವೆಂದು ಹೇಳಲ್ಲ. ಕಾಂಗ್ರೆಸ್ ಕಾಲ್ಗುಣವೂ ಹೌದು. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಾಗ ಬರ ಪರಿಸ್ಥಿತಿ ಬಂದಿದೆ ಎಂದು ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದೆನಿಸುತ್ತಿದೆ. ಬಿ.ಕೆ.ಹರಿಪ್ರಸಾದ್ ಹೂಬ್ಲೋಟ್ ವಾಚ್, ಪಂಚೆಯೊಳಗಿನ ಖಾಕಿ ಚೆಡ್ಡಿ ಎಂದೆಲ್ಲಾ ಸಿದ್ದರಾಮಯ್ಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಎಐಸಿಸಿ ಅವರಿಗೆ ನೋಟೀಸ್ ಕೂಡ ಕೊಟ್ಟಿದೆ. ಇದರ ಹಿಂದೆ ಡಿ.ಕೆ.ಶಿವಕುಮಾರ್ ಯೋಜನೆಯಿದೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ರಾಜಣ್ಣ ಮೂರು ಜನ ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಯೋಜನೆ ಇದೆ ಎನ್ನಲಾಗುತ್ತಿದೆ ಎಂದರು.

ಮನುಸ್ಮೃತಿ ಹೇರಿಕೆ ವಿಚಾರದಲ್ಲಿ ಮತ್ತೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ
ಸಿದ್ದರಾಮಯ್ಯ ಮನುಸ್ಮೃತಿ ಹೇರಿಕೆ ಯತ್ನ ಆಗುತ್ತಿದೆ ಎನ್ನುತ್ತಾರೆ. ಈ ದೇಶದಲ್ಲಿ ಹಲವು ರಾಜರು ಆಳ್ವಿಕೆ ನಡೆಸಿದ್ದಾರೆ. ಯಾವ ರಾಜರೂ ಮನುಸ್ಮೃತಿಯನ್ನೇ ಸಂವಿಧಾನವನ್ನಾಗಿ ಮಾಡಿಲ್ಲ. ಸದ್ಯ ಯಾವ ರಾಜ್ಯವೂ ಮನುಸ್ಮೃತಿಯನ್ನು ಆಡಳಿತದ ಭಾಗ ಎಂದಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಈ ಹೇಳಿಕೆ ಕೊಡುತ್ತಾರೆ. ಫ್ಯಾಕ್ಟ್ ಚೆಕ್ ಮಾಡಬೇಕೆಂದು ಹೇಳಿದ್ದೀರಿ, ನಿಮ್ಮಲ್ಲಿ ಇದರ ಬಗ್ಗೆ ಯಾವ ಆಧಾರ ಇದೆ. ಮನುಸ್ಮೃತಿ ಹೇರಿಕೆ ವಿಚಾರದಲ್ಲಿ ಮತ್ತೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಆದ್ದರಿಂದ ಅವರದ್ದೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಸಿದ್ದರಾಮಯ್ಯ ಸುಳ್ಳು ಸುದ್ದಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕೆಂದಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಸುಳ್ಳು ಸುದ್ದಿ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ಹಾಕಲಿ ಎಂದರು.
ಸಚಿವ ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಮಾಡಿದ್ದಾರೆಂದು ಪ್ರಕರಣ ದಾಖಲಾಗಿರುವಾಗ ಅವರನ್ನು ಸಂಪುಟದಿಂದ ಕೈಬಿಟ್ಟು ತನಿಖೆ ನಡೆಸಬೇಕಿತ್ತು. ಪ್ರಿಯಾಂಕ್ ಖರ್ಗೆ ಸದ್ಯ ಎಲ್ಲಾ ಖಾತೆಗಳ ಜಿಪಿಎ ತೆಗೊಂಡಿದಾರೆ. ಸಿಎಂ ಸೇರಿ ಎಲ್ಲಾ ಖಾತೆಗಳನ್ನು ಖರ್ಗೆ ಹ್ಯಾಂಡಲ್ ಮಾಡುತ್ತಿದ್ದಾರೆ. ಆದರೆ ಸುಧಾಕರ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ಅಕ್ರಮ ನಡಿಯುತ್ತಿದೆ. ಕಪ್ಪ ಕಾಣಿಕೆ ಕೊಟ್ಟವರಿಗೆ ವರ್ಗಾವಣೆ ಮಾಡಿ ಜಾಗ ತೋರಿಸುತ್ತಿದ್ದಾರೆ. ಕಪ್ಪ ಕೊಡದವರಿಗೆ ಯಾವುದೇ ಜಾಗ ತೋರಿಸದೇ ವರ್ಗಾವಣೆ ಮಾಡ್ತಿದಾರೆ ಎಂದು ಸಿ.ಟಿ.ರವಿ ಹೇಳಿದರು.












Click it and Unblock the Notifications