ಶಿಕ್ಷೆ ಪ್ರಕಟವಾದಾಗ ಪರಾರಿಯಾದ ಜೈಲು ಹಕ್ಕಿ
ಮಂಗಳೂರು, ಏ. 23 : ಕೊಲೆ ಆರೋಪದ ಮೇಲೆ ಐದು ವರ್ಷದಿಂದ ಜೈಲಿನಲ್ಲಿದ್ದ ಆರೋಪಿ ಬುಧವಾರ ಆರೋಪ ಸಾಬೀತಾಗುತ್ತಿದ್ದಂತೆ ಕೋರ್ಟ್ ಆವರಣದಿಂದ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸರು ಕೈದಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಿಂದ ಬುಧವಾರ, 2011 ರಲ್ಲಿ ಮುಲ್ಲಕಾಡ್‌ನಲ್ಲಿ ನಡೆದ ಕುಮಾರನ ಕೊಲೆ ಪ್ರಕರಣದ ಆರೋಪಿ ಅಕ್ಷಯ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. [ಮಂಗಳೂರು ಜೈಲಿನಲ್ಲಿ ಶೀಘ್ರವೇ ಮೊಬೈಲ್ ಜಾಮರ್]

ಆರೋಪ ಸಾಬೀತಾಗಿತ್ತು : 2011 ಜೂ. 15 ರಂದು ಕುಮಾರನ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್, ಗೌರೀಶ್, ಹರ್ಷರಾಜ್, ಗೌತಮ್, ಅಕ್ಷಯ್ ಎಂಬ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಐದು ವರ್ಷಗಳ ನಂತರ ಕೊಲೆ ಆರೋಪ ಸಾಬೀತಾಗಿತ್ತು. [ಜೈಲಿನ ಹೆಬ್ಬಾಗಿಲಿನಿಂದಲೇ ಖೈದಿ ಎಸ್ಕೇಪ್]
ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ ಪ್ರಕರಣದ ವಿಚಾರಣೆ ನಡೆದಿದ್ದು, ಎಲ್ಲಾ 5 ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಸಂಜೆ ವಿಚಾರಣೆ ಮುಗಿಸಿ 5 ಅಪರಾಧಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುತ್ತಿದ್ದಾಗ, ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದ ಅಕ್ಷಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications