ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ
ಮಂಗಳೂರು, ಫೆ. 17 : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿ ವಿವಿಧ ಸೌಲಭ್ಯಗಳನ್ನು ಘೋಷಿಸಲಾಗಿದೆ. ಆದರೆ, ಹೆಚ್ಚಿನ ಸೌಲಭ್ಯಗಳು ಕಾರ್ಮಿಕರಿಗೆ ದೊರೆಯುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ ಅವರು ದುಡಿಯುವ ವರ್ಗದವರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ದೂರಿದರು.

ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಕಟ್ಟಡ ಕಾರ್ಮಿಕರನ್ನು ಕಡೆಗಣಿಸುತ್ತಿವೆ ಎಂದು ಆರೋಪಿಸಿದರು. ಕಟ್ಟಡ ನಿರ್ಮಾಣ ರಂಗದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದ್ದು, ಇದು ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. [ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ]
ಕರಕುಶಲ ಕಾರ್ಮಿಕರಿಗೆ ಕನಿಷ್ಟ 15,000 ರೂಪಾಯಿ ವೇತನ ಸಿಗಬೇಕು. ಆರ್‍ಎಸ್‍ಬಿವೈಯಲ್ಲಿ ಕಟ್ಟಡ ಕಾರ್ಮಿಕರಿಗೆ ರೂ. 30,000 ಬದಲಾಗಿ 1 ಲಕ್ಷ ನಿಗದಿ ಪಡಿಸಬೇಕು. ಕಟ್ಟಡ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡಬೇಕು. ಕಲ್ಯಾಣ ಮಂಡಳಿಯಲ್ಲಿ ಸಿಐಟಿಯುಗೆ ಪ್ರಾತಿನಿದ್ಯ ನೀಡಬೇಕು. ನವೀಕರಣಕ್ಕೆ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು. [ಎಂಆರ್ ಪಿಎಲ್ ಮುಂದೆ ಶವವಾದ ಗ್ರಾಮಸ್ಥರು!]
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ವಿತರಿಸುತ್ತಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಶೇಖರಣೆಯಾಗಿರುವ 2,600ಕೋಟಿ ಹಣವನ್ನು ವಿವಿಧ ಸವಲತ್ತುಗಳಿಗಾಗಿ ಬಳಸಬೇಕಾಗಿತ್ತು. ಆದರೆ, ಇದನ್ನು ಖರ್ಚು ಮಾಡಿಲ್ಲ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯು ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಜಯಂತಿ ಬಿ. ಶೆಟ್ಟಿ, ಕಟ್ಟಡ ಕಾರ್ಮಿಕರ ಜಿಲ್ಲಾ ಅಧ್ಯಕ್ಷರಾದ ಬಿ.ಎಂ ಭಟ್, ಜಯಂತ ನಾಯ್ಕ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.












Click it and Unblock the Notifications