ಜಿಎಸ್‌ಟಿ ಬಗ್ಗೆ ಅಂದು ರಾಹುಲ್ ಗಾಂಧಿ ಹೇಳಿದ ಮಾತು ಸತ್ಯವಾಗಿದೆ: ಯುಟಿ ಖಾದರ್
ಮಂಗಳೂರು, ಜುಲೈ 19: ಕೇಂದ್ರಸರ್ಕಾರದಿಂದ ದಿನಬಳಕೆಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಳವನ್ನು ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅಂದೇ ಜಿಎಸ್‌ಟಿಯನ್ನು 'ಗಬ್ಬರ್ ಸಿಂಗ್ ಟಾಕ್ಸ್' ಅಂತಾ ಹೇಳಿದ್ದರು. ಆಗ ಜನ ಎಲ್ಲಾ ರಾಹುಲ್ ಗಾಂಧಿ ಮಾತಿಗೆ ನಕ್ಕಿದ್ದರು. ಆದರೆ ಈಗ ರಾಹುಲ್ ಮಾತು ನಿಜ ಅಂತಾ ಜನರಿಗೆ ಗೊತ್ತಾಗುತ್ತಿದೆ ಎಂದು ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್, ಸರ್ಕಾರ ಮಕ್ಕಳು ತಿನ್ನುವ ಆಹಾರ, ಬಳಸುವ ಪೆನ್ನು,ಪೆನ್ಸಿಲ್‌ಗೂ ತೆರಿಗೆ ಹಾಕಿದೆ. ಅಕ್ಕಿಗೆ ಬೇರೆ ಮಂಡಕ್ಕಿಗೆ ಬೇರೆ ತೆರಿಗೆ ಹಾಕಿದೆ. ಸರ್ಕಾರ ಎಲ್ಲದ್ದಕ್ಕೂ ಟಾಕ್ಸ್ ಹಾಕಿ ಆಯಿತು, ಇನ್ನು ಶವ ಎತ್ತಿಕೊಂಡು ಹೋಗುವುದಕ್ಕೂ ಟಾಕ್ಸ್ ಹಾಕದಿದ್ದರೆ ಸಾಕು. ಇಷ್ಟೆಲ್ಲಾ ತೆರಿಗೆ ಹಾಕಿದರೂ ಜನೋಪಯೋಗಿ ಯೋಜನೆ ಒಂದೂ ತರಲಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ. ಆದರೆ ರಾಜ್ಯದ ಸಂಸದರೆಲ್ಲಾ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂದು ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಜನರನ್ನು ಲೂಟಿ ಮಾಡಿ ತನ್ನ ಖಜಾನೆ ತುಂಬಿಸುತ್ತಿದೆ. ಬಡವರು ಬಳಸುವ ವಸ್ತುಗಳಿಗೆ ತೆರಿಗೆ ಜಾಸ್ತಿ ಹಾಕಿದ್ದಾರೆ. ಆದರೆ ಶ್ರೀಮಂತರ ಮೇಲಿನ ಕಾರ್ಪೊರೇಟ್ ಟಾಕ್ಸ್ ಮಾತ್ರ ಕಡಿಮೆ ಮಾಡಿದ್ದಾರೆ. ಕೇಂದ್ರದ ಈ ನೀತಿಗೆ ಜನರ ಮೌನವೂ ಕಾರಣವಾಗಿದೆ. ಜನಸಾಮಾನ್ಯರ ಮೇಲೆ ಸರ್ಕಾರಕ್ಕೆ ಮಾನವೀಯತೆ ಕರುಣೆ ಇಲ್ಲ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಸರ್ವ್ ಬ್ಯಾಂಕ್‌ನಲ್ಲಿಟ್ಟಿದ್ದ ಹಣವನ್ನೆಲ್ಲಾ ಲೂಟಿ
ಇಂದಿರಾಗಾಂಧಿ ದೇಶದ ತುರ್ತು ಪರಿಸ್ಥಿತಿಗೆ ಅಂತಾ ತೆಗೆದಿಟ್ಟ ಹಣವನ್ನೂ ಕೇಂದ್ರ ಸರ್ಕಾರ ಖಾಲಿ ಮಾಡಿದೆ. ರಿಸರ್ವ್ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವನ್ನೆಲ್ಲಾ ಲೂಟಿ ಮಾಡಿದ್ದಾರೆ. ದೇಶದ ಜನ ಎಚ್ಚೆತ್ತು ಸಮರ್ಪಕವಾದ ನಿರ್ಧಾರ ಮಾಡಬೇಕು. ದೇಶದ ಜನ ಎದ್ದು ನಿಂತು ಸರಿಯಾದ ಪಾಠ ಕಲಿಸಬೇಕು. ಇಲ್ಲವಾದಲ್ಲಿ ದೇಶ ಚಿಂತಾಜನಕ ಸ್ಥಿತಿಯನ್ನು ತಲುಪುತ್ತದೆ ಎಂದು ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ.

ವಿದೇಶದ ತೆರಿಗೆ ಭಾರತೀಯರ ಮೇಲೆ ಪ್ರಯೋಗ
ದೇಶದ ಜನರಿಗೆ ಅಕೌಂಟ್ ತೆರೆಯಿರಿ ಸಬ್ಸಿಡಿ ನೇರ ಖಾತೆಗೆ ಜಮಾವಣೆ ಆಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಸದ್ಯದ ಸ್ಥಿತಿ ಏನಾಗಿದೆ? ಗ್ಯಾಸ್ ಬೆಲೆ ಸಾವಿರ ಗಡಿ ದಾಟಿದೆ. ಯಾರ ಖಾತೆಗೆ ಸಬ್ಸಿಡಿ ಬಂದಿದೆ. ಈಗ ಜನ ಸಾಮಾನ್ಯ ಗ್ಯಾಸ್ ಖರೀದಿ ಮಾಡಲು ಸಾಧ್ಯನಾ ಎಂದು ಸರಕಾರ ಯೋಚನೆ ಮಾಡಲಿ. ಅಮೆರಿಕಾಗೆ ಹೋಗಿ ಅಲ್ಲಿನ ಯೋಜನೆಗಳನ್ನು ಇಲ್ಲಿ ತಂದು ಜಾರಿಗೆ ತರುತ್ತಾರೆ ಎಂದು ಎಲ್ಲರನ್ನು ನಂಬಿಸಿದ್ದರು. ಇವರು ಅಲ್ಲಿನ ತೆರಿಗೆಯನ್ನು ಇಲ್ಲಿನ ಜನರ ಮೇಲೆ ಪ್ರಯೋಗ ಮಾಡಿದ್ದಾರೆ ಅಂತಾ ಯುಟಿ ಖಾದರ್ ಕಿಡಿಕಾರಿದ್ದಾರೆ.

ಜನರು ಪ್ರಶ್ನಿಸದಿದ್ದರೆ ಚಿಂತಾಜನಕ ಪರಿಸ್ಥಿತಿ
ಸರಕಾರದ ಈ ಧೋರಣೆಯನ್ನು ಜನಸಾಮಾನ್ಯರು ಪ್ರಶ್ನಿಸಬೇಕಿದೆ. ಸಾರ್ವಜನಿಕರು ಮೌನವಾಗಿರುವುದರಿಂದಲೇ ಜನವಿರೋಧಿ ನೀತಿಗಳು ಏರಿಕೆಗೆ ಕಾರಣವಾಗಿದೆ. ಇದರಿಂದ ಭವಿಷ್ಯದ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಚಿಂತಾಜನಕ ಸ್ಥಿತಿ ತಲುಪಲಿದೆ. ಹಾಗಾಗಿ ಕಾಂಗ್ರೆಸ್ ಈ ವಿಚಾರವನ್ನು ದೊಡ್ಡಮಟ್ಟದಲ್ಲಿ ಹೋರಾಟ ಮಾಡುವ ಮೂಲಕ ಜನರ ಬಳಿಗೆ ಇಂತಹ ವಿಚಾರಗಳನ್ನು ಕೊಂಡೊಯ್ಯಲಿದೆ ಎಂದು ತಿಳಿಸಿದರು.

ಜಿಎಸ್‌ಟಿ ಅನುಧಾನದಲ್ಲಿ ಕೇಂದ್ರದಿಂದ ಅನ್ಯಾಯ
ಜಿಎಸ್‌ಟಿ ಅನುದಾನದಲ್ಲಿಯೂ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ದೇಶದಲ್ಲೇ ಕರ್ನಾಟಕ ಅತ್ಯಧಿಕ ತೆರಿಗೆ ಪಾವತಿದಾರರ 2ನೇ ರಾಜ್ಯವಾಗಿದೆ. ಆದರೂ ಜಿಎಸ್‌ಟಿ ಪಾಲಿನಲ್ಲಿ ರಾಜ್ಯಕ್ಕೆ ದೊರಕಿದ್ದು 1,26,000 ಕೋಟಿ ರೂ. ಮಾತ್ರ. ವಾಸ್ತವದಲ್ಲಿ ಅದು 19.50 ಲಕ್ಷ ಕೋಟಿ ರೂ.ಗಳಾಗಬೇಕಿದೆ. ಇದನ್ನು ಪ್ರಶ್ನಿಸಬೇಕಾದ ರಾಜ್ಯದ ಅವರದ್ದೇ ಸರಕಾರದ 25 ಮಂದಿ ಸಂಸದರು ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.












Click it and Unblock the Notifications