ನೆಟ್ಟಾರು ಕೊಲೆ ಪ್ರಕರಣದಲ್ಲಿ ನಳಿನ್ ಕುಮಾರ್ ಕಟೀಲ್‌ಗೆ ಮಂಪರು ಪರೀಕ್ಷೆ ಮಾಡಬೇಕು-ಬಿ.ಕೆ ಹರಿಪ್ರಸಾದ್
ಮಂಗಳೂರು, ಜನವರಿ 6: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಹರೇಕಳದನಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಕೊಲೆ ಕೇಸ್ ನಲ್ಲಿ ನಳಿನ್‌ಗೆ ಮಂಪರು ಪರೀಕ್ಷೆ ಮಾಡಿದರೆ ಅವರೇ ಸಿಕ್ಕಿಹಾಕಿಕೊಳ್ಳುತ್ತಾರೆ. ಇದರಲ್ಲಿ ಅವರ ಕೈವಾಡ ಏನು ಅಂತಾ ಗೊತ್ತಾಗುತ್ತದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಅಂಧಭಕ್ತರು ವಿಶ್ವಗುರು ಅಂತಾರೆ. ಆದರೆ ದೇಶಕ್ಕೆ ಕಾಂಗ್ರೆಸ್ ಮಾಡಿದ ಕೊಡುಗೆಗಳನ್ನೆಲ್ಲಾವನ್ನು ಮೋದಿ ಮಾರಿದ್ದಾರೆ. ಅಪ್ಪ ಮಾಡಿದ ಆಸ್ತಿ, ತಾತ ಮಾಡಿದ ಆಸ್ತಿಯನ್ನು ಮಗ ಮಾರಿದರೆ ಅವನನ್ನು ಮನೆಹಾಳ ಎಂದು ಕರೆಯುತ್ತಾರೆ. ಇವರೂ ಮನೆಹಾಳರೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಖಾಕಿ ಚಡ್ಡಿ, ಕರಿ ಟೋಪಿಯವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ.ಆದರೆ ಯಾವೊಬ್ಬ ಖಾಕಿ ಚಡ್ಡಿ, ಕರಿ ಟೋಪಿಯವನೂ ಸ್ವಾತಂತ್ರ್ಯಕ್ಕೆ ಹೋರಾಡಿಲ್ಲ. ಕ್ಷಮಾಪಣೆ ಬರೆದ ಸಾವರ್ಕರ್ ಹೆಸರೇಳೋ ಬಿಜೆಪಿಗೆ ನಾಚಿಕೆ ಆಗಬೇಕು. ಬಿಜೆಪಿ ಅಧ್ಯಕ್ಷ ಪಿಟೀಲ್ ಕುಮಾರೋ ಡಾಲರ್ ಕುಮಾರೋ ಗೊತ್ತಿಲ್ಲ. ನಳಿನ್ ಕೋಮು ವಿಚಾರದ ಮೂಲಕ ಬೆಂಕಿ ಕಡ್ಡಿ ಗೀರುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ. ಆದರೆ ಈ ಉಡುಪಿ, ಮಂಗಳೂರು ಹೋದ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ 18ನೇ ಸ್ಥಾನಕ್ಕೆ ಹೋಗಿದೆ. ಇವರ ಕೈಗೆ ಅಧಿಕಾರ ಕೊಟ್ಟರೆ ಮಕ್ಕಳಿಗೆ ಪೆನ್ನಿನ ಬದಲು ಚಾಕು, ಚೂರಿ, ತಲ್ವಾರ್,ತ್ರಿಶೂಲ ಕೊಡುತ್ತಾರೆ.ಈ ನೆಲ ಅಬ್ಬಕ್ಕನ ನೆಲ, ರಣ ಹೇಡಿಗಳ ನೆಲ ಅಲ್ಲ. ಇವರ ಕೈಗೆ ಅಧಿಕಾರ ಕೊಟ್ಟು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.

ಇನ್ನು ನಳಿನ್ ಕಟೀಲ್ ಮತ್ತು ಅವರ ಪಕ್ಷ ಬಂದ ನಂತರ ಯಾರಿಗೂ ಉದ್ಯೋಗ ಸಿಗುತ್ತಿಲ್ಲ. ಗಡಿಪಾರು ಅಮಿತ್ ಶಾ ನಂದಿನಿನಾ ಅಮೂಲ್‌ಗೆ ಮಾರಾಟ ಮಾಡಲು ಹೊರಟಿದ್ದಾರೆ. ಅಮಿತ್ ಶಾಗೆ ಯಾರೋ ಉಕ್ಕಿನ ಮನುಷ್ಯ ಅಂತಾರೆ, ಆದರೆ ಈ ದೇಶಕ್ಕೆ ಸರದಾರ್ ವಲ್ಲಭಾಯಿ ಪಟೇಲ್ ಒಬ್ಬನೇ ಉಕ್ಕಿನ ಮನುಷ್ಯ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಗಾಂಧೀಜಿ, ಇಂದಿರಾ ಗಾಂಧಿಯಂಥವರ ಕೊಲೆಯನ್ನು ಮುಸಲ್ಮಾನರು ಮಾಡಿಲ್ಲ, ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದವರೇ. ಆದರೆ ಮುಸ್ಲಿಮರ ಮೇಲೆ ಗೂಬೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications