ಮಂಗಳೂರು: ಭಜರಂಗದಳ ಕಾರ್ಯಕರ್ತರನ್ನು ಕೊಂಡಾಡಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ!
ಮಂಗಳೂರು, ಅಕ್ಟೋಬರ್ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಯುವತಿಯರು ಅನ್ಯಧರ್ಮದ ಯುವಕರ ಜೊತೆ ಓಡಾಡುತ್ತಿರುವುದನ್ನು ಪತ್ತೆ ಹಚ್ಚಿ ಭಜರಂಗದಳ ಕಾರ್ಯಕರ್ತರು ದಾಳಿ ಮಾಡುತ್ತಿರುವ ಪ್ರಕರಣಗಳು ಸದ್ದು ಮಾಡುತ್ತಿವೆ.
ವಿಪಕ್ಷದ ಆದಿಯಾಗಿ ಎಡಪಂಥೀಯ ಸಂಘಟನೆಗಳು, ಬುದ್ಧಿಜೀವಿಗಳು, ಭಜರಂಗದಳದ ದಾಳಿ ವಿರುದ್ಧ ಕಿಡಿಕಾಡಿದರೆ, ಸದಾ ಭಜರಂಗದಳವನ್ನು ಕೆಣಕುತ್ತಲೇ ಇರುವ ಮಂಗಳೂರಿನ ಮಾಜಿ ಕಾರ್ಪೊರೇಟರ್, ಕೆಪಿಸಿಸಿ ಸಮನ್ವಯಕಾರೆ ಪ್ರತಿಭಾ ಕುಳಾಯಿ ಮಾತ್ರ ಭಜರಂಗದಳದ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಅಕ್ಟೋಬರ್ 3ನೇ ತಾರೀಖು ಮಂಗಳೂರು ನಗರ ಹೊರವಲಯದ ಗುರುಪುರ ಸಮೀಪದ ಚಿಲಿಂಬಿಗುಡ್ಡೆಯಲ್ಲಿ ಇಬ್ಬರು ಯುವಕರೊಂದಿಗೆ, ಓರ್ವ ಅಪ್ರಾಪ್ತೆ ಮತ್ತು ಯುವತಿ ಇರುವುದನ್ನು ಗಮನಿಸಿದ ಭಜರಂಗದಳದ ಕಾರ್ಯಕರ್ತರು ಬಜಪೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಿ ಜೋಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ವೇಳೆ ಯುವಕರಾದ ಮಂಗಳೂರಿನ ಪಂಜಿಮೊಗರು ನಿವಾಸಿ ಶಾಕೀರ್, ಬೊಂದೇಲ್‌ನ ಕೃಷ್ಣನಗರ ನಿವಾಸಿ ಧೀರಜ್ ಡ್ರಗ್ಸ್ ಸೇವಿಸಿರುವುದು ಬೆಳಕಿಗೆ ಬಂದಿತ್ತು. ಮಾದಕ ವ್ಯಸನಿಗಳ ಜೊತೆಗೆ ಬಂದ ಅಪ್ರಾಪ್ತೆ ಮತ್ತು ಯುವತಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಬಂದಿದ್ದು, ಇದರಿಂದ ಸಂಶಯಗೊಂಡ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ ಬಳಿಕ ಯುವತಿ ಮತ್ತು ಅಪ್ರಾಪೆಯ ಬಗ್ಗೆ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಮಾದಕ ವ್ಯಸನಿಗಳ ಜೊತೆ ಯುವತಿ ಮತ್ತು ಅಪ್ರಾಪ್ತೆಗೆ ಏನು ಸಂಬಂಧ ಎಂಬುವುದರ ಬಗ್ಗೆ ಗೊಂದಲಕ್ಕೆ ಅಪ್ರಾಪ್ತೆಯ ತಾಯಿ ಉತ್ತರ ನೀಡಿದ್ದಾರೆ.
ಈ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆ ಮಾಹಿತಿ ಹಂಚಿಕೊಂಡ ಅಪ್ರಾಪ್ತೆಯ ತಾಯಿ, ಶಾಕೀರ್ ಮತ್ತು ಮಗಳ ಜೊತೆ ಹಲವು ದಿನಗಳ ಸ್ನೇಹ ಇದೆ. ಮನೆಯಲ್ಲಿ ಗಂಡು ದಿಕ್ಕಿಲ್ಲದ ಕಾರಣ ಬಹಳ ಸಲುಗೆಯಿಂದ ಇದ್ದಾಳೆ. ಅವಳಿಗೆ ಸದ್ಯ ೧೬ ವರ್ಷ ತುಂಬುತ್ತಿದ್ದು, ರಾತ್ರಿ ಯಾವಾಗಲೂ ಮನೆಗೆ ಬರುವುದು ತಡವಾಗುತ್ತದೆ. ಕೆಲವೊಮ್ಮೆ ರಾತ್ರಿ ಮನೆಯಿಂದ ಹೊರಟು ಮಧ್ಯರಾತ್ರಿ ಎರಡು ಗಂಟೆಗೆ ಮನೆ ತಲುಪುತ್ತಾಳೆ. ರಾತ್ರಿ ಮನೆಗೆ ಬರುವಾಗಲೇ ಅಮಲಿನಿಂದಲೇ ಬರುತ್ತಾಳೆ. ಮಾರನೇ ದಿನವೂ ಅಮಲಿನಲ್ಲೇ ಇರುತ್ತಾಳೆ. ಕೇಳಿದರೆ ನನ್ನ ಮೇಲೆಯೇ ರೇಗಾಡುತ್ತಾಳೆ ಅಂತಾ ಅಪ್ರಾಪ್ತೆ ಬಾಲಕಿಯ ತಾಯಿ ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಅಪ್ರಾಪ್ತೆಯ ಜೊತೆಗಿದ್ದ ಯುವತಿಯೂ ಶೋಕಿ ಜೀವನದ ಆಕರ್ಷಣೆಗೆ ಒಳಗಾಗಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಯುವತಿ ಮಂಗಳೂರಿನ ನಾಸಿಕ್ ಬ್ಯಾಂಡ್ ತಂಡದ ಸದಸ್ಯಳಾಗಿದ್ದಳು. ಆಕೆಗೆ ಆರೋಪಿ ಧೀರಜ್ ಪರಿಚಯವಾಗಿ ಆತನೊಂದಿಗೆ ತೆರಳಿದ್ದಾಳೆ.
ಹಾದಿ ತಪ್ಪಿದ ಯುವತಿ ಮತ್ತು ಬಾಲಕಿಯ ಬಗ್ಗೆ ಆತಂಕಕಾರಿ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಮಂಗಳೂರಿನ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಮಾದಕಲೋಕದ ದಾಸಿಯಾಗಲು ಹೊರಟಿದ್ದ ಯುವತಿ ಮತ್ತು ಅಪ್ರಾಪ್ತ ಬಾಲಕಿಯ ರಕ್ಷಣೆ ಮಾಡಿದ ಭಜರಂಗದಳ ಕಾರ್ಯಕರ್ತರ ಕೆಲಸವನ್ನು ಕೊಂಡಾಡಿದ್ದಾರೆ.
"ಕಾನೂನು ಕೈಗೆ ತೆಗೆದುಕೊಳ್ಳದೇ ಪೊಲೀಸರಿಗೆ ಒಪ್ಪಿಸುವ ಮೂಲಕ ಭಜರಂಗದಳದ ಕಾರ್ಯಕರ್ತರು ಅಭಿನಂದನೀಯ ಕೆಲಸ ಮಾಡಿದ್ದಾರೆ. ಡ್ರಗ್ಸ್ ಪಿಡುಗಿನ ಬಗ್ಗೆ ಎಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಹಾದಿ ತಪ್ಪುತ್ತಿರುವ ಯುವತಿಯರಿಗೆ ಸರಿಯಾದ ಕೌನ್ಸಿಲಿಂಗ್ ನೀಡಬೇಕಿದೆ. ಈ ಬಗ್ಗೆ ನಾನು ಯಾವುದೇ ಸಹಾಯಕ್ಕೆ ಸಿದ್ಧ," ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಭಜರಂಗದಳವನ್ನು ಖಂಡತುಂಡವಾಗಿ ವಿರೋಧಿಸುವ ಪ್ರತಿಭಾ ಕುಳಾಯಿ, ಈ ಬಾರಿ ಕಾನೂನು ಮೂಲಕವೇ ಕಾರ್ಯಾಚರಣೆ ಮಾಡಿದ ಭಜರಂಗದಳ ಕಾರ್ಯಕರ್ತರನ್ನು ಶ್ಲಾಘಿಸಿದ್ದಾರೆ.












Click it and Unblock the Notifications