ಬಸ್‌ನಲ್ಲಿ ಕೋಳಿ ಮಾಂಸ ತಂದ ಕಾರ್ಮಿಕ, ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಕರೆದೊಯ್ದ ಚಾಲಕ
ಮಂಗಳೂರು, ಅಕ್ಟೋಬರ್ 16: ಕೂಲಿ ಕಾರ್ಮಿಕನೊಬ್ಬ ಕೋಳಿ ಮಾಂಸ ಹಿಡಿದು ಬಸ್ ಹತ್ತಿದಕ್ಕೆ ಸಾರಿಗೆ ಬಸ್‌ನಲ್ಲಿ ಅವಾಂತರ ಸೃಷ್ಟಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಪ್ರಯಾಣಿಕನೋರ್ವ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದಿರುವುದಲ್ಲದೇ, ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್‌ಅನ್ನು ಸೀದಾ ಪೊಲೀಸ್ ಠಾಣೆಗೆ ತಂದ ಪ್ರಸಂಗ ನಡೆದಿದೆ.

ಸುರೇಶ್ ಎನ್ನುವವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ನೀಡಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಅದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ನಿಜ ವಿವಾರ ತಿಳಿಸಿದಾಗ ಬಸ್‌ನಿಂದ ಇಳಿಯುವಂತೆ ನಿರ್ವಾಹಕ ಒತ್ತಾಯಿಸಿದ್ದಾರೆ.
ಕೋಳಿ ಮಾಂಸ ಬಸ್‌ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನಾಗಿದ್ದು, ಆದರೆ ಕೂಲಿ ಕಾರ್ಮಿಕನಿಗೆ ಇದರ ಅರಿವಿಲ್ಲದೆ , ಬಸ್‌ನಿಂದ ಇಳಿಯಲು ಒಪ್ಪಲಿಲ್ಲ. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ನಿರ್ವಾಹಕ ಪ್ರಯಾಣಿಕನಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಈತ ಕೊನೆಗೂ ಬಸ್‌ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್‌ಅನ್ನು ಸೀದಾ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿ ಹೋಗಿದ್ಧಾನೆ. ಈ ವೇಳೆ ಠಾಣೆಯಲ್ಲಿದ್ದ ಎಸ್.ಐ.ರಾಮಕೃಷ್ಣ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ.
ಕೂಲಿ ಕಾರ್ಮಿಕರು ಬಸ್‌ನಲ್ಲಿ ಮಾಂಸ , ಮೀನು ಕೊಂಡು ಅವಕಾಶ ವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಪ್ರಯಾಣಿಕ ಮಾಡಿದ್ದಾನೆ. ಕಾರು , ರಿಕ್ಷಾ ಬಾಡಿಗೆ ಮಾಡಿಕೊಂಡು ಒಂದು ಕೆ.ಜಿ ಕೋಳಿ ತೆಗೆದುಕೊಂಡು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ.
ಬಡವರು ಕೋಳಿ ಮಾಂಸ ತೆಗೆದುಕೊಂಡು ಹೋದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದ್ದು, ನಿರ್ವಾಹಕ ಚಾಲಕರ ಇಂತಹ ನಡೆಯ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿದೆ.
" ಕೋಳಿ,ಮೀನು ಮಾಂಸ ಬಸ್‌ನಲ್ಲಿ ತರುವಂತಿಲ್ಲ, ಜೀವ ಇರುವ ವಸ್ತುವನ್ನು ತರಬಹುದು, ಮಾಂಸ ಇತರರಿಗೆ ವಾಸನೆ ಬರುತ್ತದೆ. ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ" ಎಂದು ಕೆಎಸ್‌ಆರ್‌ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications