ನಾಲ್ಕು ಗೋಡೆಯ ಜಗತ್ತಿನಿಂದ ಹೊರಬಂದ ಹಾಸಿಗೆ ಹಿಡಿದವರು: ಹೊರಪ್ರಪಂಚದ ವಿಹಾರಕ್ಕೆ ಫುಲ್ ಖುಷ್
ಮಂಗಳೂರು, ನವೆಂಬರ್ 07: ಮರದಿಂದ ಬಿದ್ದು, ಬೆನ್ನು ಮೂಳೆ ಮುರಿದುಕೊಂಡು, ಬಾವಿಗೆ ಬಿದ್ದು ಕೈಕಾಲು ಸ್ವಾಧೀನ ಕಳೆದುಕೊಂಡು ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದವರು ಹಲವು ವರ್ಷಗಳ ನಂತರ ಹೊರ ಜಗತ್ತು ನೋಡಿದ್ದಾರೆ.
ತಮ್ಮ ದೈನಂದಿನ ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸುವ ಇವರು ಹೊರಪ್ರಪಂಚ ನೋಡಿ ವರುಷಗಳು ಹಲವಾರು ಸಂದವು. ಹೀಗೆ ಹಾಸಿಗೆ ಹಿಡಿದವರಿಗೆ ಒಂದು ದಿನದ ಮಟ್ಟಿಗೆ ಹೊರಪ್ರಪಂಚದ ಬೆಳಕು ತೋರಿಸಲು ಮುಂದಾದವರು ಕೋಸ್ಟಲ್ ಫ್ರೆಂಡ್ಸ್ ಎಂಬ ಸಮಾಜ ಸೇವಾ ಸಂಸ್ಥೆ.

ದ.ಕ.ಜಿಲ್ಲೆಯ ಪೆರ್ನೆ, ಕಲ್ಲಾಪು, ಕುತ್ತಾರ್, ತೊಕ್ಕೊಟ್ಟು ಹಾಗೂ ಉಳ್ಳಾಲದ ಹಾಸಿಗೆ ಹಿಡಿದ ಒಟ್ಟು ಆರು ಮಂದಿಗೆ ಕುಟುಂಬ ಸಹಿತ ಒಂದು ದಿನದ ಸಾಂತ್ವನ ಸಂಚಾರವನ್ನು ಈ ಸಂಸ್ಥೆ ಒದಗಿಸಿದೆ. ಬೆಳಗ್ಗೆ ಪಿಲಿಕುಳ ನಿಸರ್ಗಧಾಮ, ಮಧ್ಯಾಹ್ನದ ಬಳಿಕ ತಣ್ಣೀರುಬಾವಿ ಬೀಚ್, ಸಂಜೆಯಾಗುತ್ತಿದ್ದಂತೆ ಮಾಲ್‌ಗೆ ಸುತ್ತಾಡಿಸಿದ್ದಾರೆ.
ಬೆಳಗ್ಗೆ ಬಿಎಂಎಸ್ ಹೋಟೆಲ್‌ನಲ್ಲಿ ಚಹಾ ಸೇವನೆ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಬೋಟಿಂಗ್ ಮಾಡಿಸಿ ಮಧ್ಯಾಹ್ನದ ಊಟದ ಮಾಡಿಸಲಾಗಿದೆ. ಬಳಿಕ ತಣ್ಣೀರುಬಾವಿ ಬೀಚ್ ಗೆ ಕರೆದೊಯ್ದು ಅಲ್ಲಿ ಟ್ರೀಪಾರ್ಕ್ ತೋರಿಸಿ, ಸಮುದ್ರ ವಿಹಾರ ಮಂಡಿಸಲಾಯಿತು.

ಬಳಿಕ ನಗರದ ಫಿಝಾ ನೆಕ್ಸೆಸ್ ಮಾಲ್‌ಗೆ ಕರೆದೊಯ್ದು ಮಾಲ್‌ನಲ್ಲಿ ಸುತ್ತಾಡಿಸಲಾಯಿತು. ಜೊತೆಗೆ ಆರು ಕುಟುಂಬಕ್ಕೂ ತಲಾ ಐದು ಸಾವಿರ ರೂಪಾಯಿ ನೀಡಿ ಶಾಪಿಂಗ್ ಕೂಡಾ ಮಾಡಿಸಲಾಯಿತು. ಬಳಿಕ ಎಲ್ಲರನ್ನೂ ಅವರವರ ಮನೆಗೆ ಕಳಿಸಲಾಯಿತು.
ಇಷ್ಟೆಲ್ಲಾ ಸುತ್ತಾಟದ ವೇಳೆ ಎದ್ದೇಳಲು ಆಗದವರನ್ನು ಹಾಸಿಗೆಯಲ್ಲಿಯೇ ಮಲಗಿಸಿಯೇ ಎತ್ಕೊಂಡು ಕೊಂಡೊಯ್ಯಲಾಗಿದೆ. ಕುಳಿತುಕೊಳ್ಳಲು ಆಗುವವರನ್ನು ವ್ಹೀಲ್ ಚೇರ್‌ನಲ್ಲಿ ಕರೆದೊಯ್ಯಲಾಗಿದೆ. ಪ್ರತ್ಯೇಕ ಆರು ಆ್ಯಂಬುಲೆನ್ಸ್ ಗಳಲ್ಲಿ ಎಲ್ಲಾ ಕಡೆಗಳಲ್ಲಿ ಸುತ್ತಾಡಿಸಿದ್ದು, ಹಾಸಿಗೆ ಹಿಡಿದ ಓರ್ವನ ಸಹಾಯಕ್ಕೆ ಐದಾರು ಮಂದಿ ಸ್ವಯಂಸೇವಕರು ಕೈಜೋಡಿಸಿದ್ದಾರೆ. ಜೊತೆಗಿಬ್ಬರು ನರ್ಸ್‌ಗಳು ಸಹ ಇದ್ದರು. ಮೇಲ್ಛಾವಣಿ, ನಾಲ್ಕು ಗೋಡೆಗಳೇ ತಮ್ಮ ಪ್ರಪಂಚವಾಗಿದ್ದ ಈ ಆರು ಮಂದಿ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯ ಮಾನವೀಯ ಕಳಕಳಿಯಿಂದ ಹೊರಪ್ರಪಂಚದ ಸಂಪರ್ಕವನ್ನೇ ಕಾಣುವಂತಾಯಿತು.












Click it and Unblock the Notifications