ಮಂಗಳೂರು ಜೈಲಿನಲ್ಲಿ ಮಾರಾಮಾರಿ, ಇಬ್ಬರು ಕೈದಿಗಳ ಕೊಲೆ
ಮಂಗಳೂರು, ನವೆಂಬರ್ 02 : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರು ಕೈದಿಗಳನ್ನು ಹತ್ಯೆ ಮಾಡಲಾಗಿದೆ. ಆರು ಕೈದಿಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.
ವಿಚರಣಾಧೀನ ಕೈದಿಗಳಾದ ಗಣೇಶ್ ಶೆಟ್ಟಿ ಹಾಗೂ ಮಾಡೂರು ಯೂಸುಫ್ ಕೊಲೆಯಾದವರು. ಮಾರಾಮಾರಿಯಲ್ಲಿ ಗಾಯಗೊಂಡ 6 ಕೈದಿಗಳನ್ನು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ಮಂಗಳೂರು ಜೈಲಲ್ಲಿ ಶೀಘ್ರವೇ ಮೊಬೈಲ್ ಜಾಮರ್]

ಸೋಮವಾರ ಮುಂಜಾನೆ ಭೂಗತ ಪಾತಕಿ ವಿಕಿ ಶೆಟ್ಟಿ ಸಹಚರ ಆಕಾಶ್ ಭವನ್ ಶರಣ್ ಮತ್ತು ಆತನ ಸಹಚರರು ಇಬ್ಬರು ಕೈದಿಗಳ ಕೊಲೆ ಮಾಡಿದ್ದಾರೆ. ಕೊಲೆಯಾದ ಮಾಡೂರು ಯೂಸುಫ್‌ನನ್ನು ವಿದೇಶದಿಂದ ಬಂಧಿಸಿ ಕರೆ ತರಲಾಗಿತ್ತು. ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಾಗೃಹವಿದ್ದು ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. [ಮಂಗಳೂರು ಜೈಲು ಮೇಲೆ ದಾಳಿ; ಗಾಂಜಾ ವಗೈರೆ ಪತ್ತೆ]
ವೈಯಕ್ತಿಕ ದ್ವೇಷದಿಂದಾಗಿ ಕೊಲೆ : ಕಾರಾಗೃಹಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಎಸ್. ಮುರುಗನ್ ಅವರು 'ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ. ತಲ್ವಾರ್‌ನಿಂದ ಹಲ್ಲೆ ಮಾಡಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಜೈಲಿನವೊಳಗೆ ತಲ್ವಾರ್ ಹೇಗೆ ಬಂತು? ಎಂದು ತನಿಖೆ ನಡೆಸಲಾಗುತ್ತದೆ' ಎಂದು ಹೇಳಿದ್ದಾರೆ.
'ಯೂಸುಫ್ ಮತ್ತು ಆಕಾಶ್ ಭವನ್ ಶರಣ್ ಗುಂಪಿನ ನಡುವೆ ವೈಯಕ್ತಿಕ ದ್ವೇಷವಿತ್ತು. ಆದ್ದರಿಂದ ಆಕಾಶ್ ಭವನ್ ಶರಣ್ ಗುಂಪಿನವರು ಯೂಸುಫ್‌ನನ್ನು ಕೊಲೆ ಮಾಡಿದ್ದಾರೆ. ಇಬ್ಬರನ್ನು ಒಂದೇ ಸೆಲ್‌ನಲ್ಲಿ ಹೇಗೆ ಇಡಲಾಗಿತ್ತು? ಎಂಬ ಕುರಿತು ತನಿಖೆ ನಡೆಯುತ್ತಿದೆ' ಎಂದು ಮುರುಗನ್ ತಿಳಿಸಿದ್ದಾರೆ.












Click it and Unblock the Notifications