Mangaluru: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಸಂಘರ್ಷ: ಮಿಥುನ್ ರೈ ಕಾರಿಗೆ ಹಾನಿ: 144 ಸೆಕ್ಷನ್ ಜಾರಿ
ಮಂಗಳೂರು ನಗರದ ಹೊರವಲಯದ ವಾಮಂಜೂರು ಸಮೀಪದ ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಈ ವೇಳೆ ಕೈ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಹಾನಿ ಮಾಡಿರುವ ಘಟನೆ ನಡೆದಿದೆ.
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸ್ಥಳಕ್ಕೆ ಮುಲ್ಕಿ - ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೂಡುಶೆಡ್ಡೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿ ಬಿಜೆಪಿ ಪರ ಘೋಷಣೆ ಕೇಳಿ ಬಂದಿದೆ. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಘರ್ಷಣೆಯಲ್ಲಿ ಮಿಥುನ್ ರೈ ಕಾರಿಗೆ ಹಾನಿ ಸಂಭವಿಸಿದೆ.

ಘಟನೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರಿಗೆ ಗಾಯವಾಗಿದೆ. ಸ್ಥಳದಲ್ಲಿ ಒಂದು ಕೆಎಸ್ಆರ್ ಪಿ ತುಕುಡಿ ನಿಯೋಜನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸ್ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್, "ಮತದಾನ ಮುಗಿದ ಬಳಿಕ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಪರಸ್ಪರ ಘೋಷಣೆ ಕೂಗಿದ ವೇಳೆ ಗಲಾಟೆ ಆಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ." ಎಂದರು.

"ಮೂಡುಶೆಡ್ಡೆಯಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸುತ್ತೇವೆ. ಒಳಬರುವ ಮತ್ತು ಹೊರಹೋಗುವ ವಾಹನಗಳ ಮೇಲೆ ನಿಗಾ ಇಡಲಾಗಿತ್ತದೆ. ಘಟನೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿವೆ. ನಮ್ಮ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈಗಾಗಲೇ ಒಂದು ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಿದ್ದೇವೆ. ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ಪೊಲೀಸರ ನಿಯೋಜನೆ ಮಾಡುತ್ತೇವೆ" ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications