ಬೆಂಕಿಯ ಮೇಲೆ ದೈವದ ನರ್ತನ:ಹುಲಿಕಲ್ ನಟರಾಜ್ ಗೆ ಸವಾಲು
ಮಂಗಳೂರು, ಜನವರಿ 20: ಪರಶುರಾಮ ಸೃಷ್ಟಿಯ ತುಳು ನಾಡು ವೈವಿಧ್ಯಮಯ ಕಲೆಗಳ ನೆಲೆ ಬೀಡು. ದೈವಾರಾಧನೆ, ನಾಗಾರಾಧನೆ ಮುಖಾಂತರ ಪ್ರಕೃತಿಯನ್ನು ಆರಾಧಿಸಿಕೊಂಡು ಬಂದವರು ತುಳು ನಾಡಿನ ಜನರು. ಅಂತಹ ತುಳುನಾಡು ವಿಶೇಷ ಭೂತಾರಾಧನೆಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುತ್ತಲೇ ಇದೆ.
ಈ ತುಳುನಾಡಿನ ಪ್ರತಿ ಕುಟುಂಬವೂ ಒಂದಲ್ಲ ಒಂದು ದೈವಗಳನ್ನು ನಂಬಿಕೊಂಡು ಬರುತ್ತಿರುವುದು ಹಿಂದಿನಿಂದಲೂ ಬಂದ ಸಂಪ್ರದಾಯ. 400ಕ್ಕೂ ಮಿಕ್ಕಿದ ವಿವಿಧ ಪ್ರಕಾರಗಳ ಭೂತಗಳ ಆರಾಧನೆಯನ್ನು ತುಳುವರು ನಡೆಸಿಕೊಂಡು ಬರುತ್ತಿದ್ದಾರೆ.
ಇಂತಹುದೇ ವಿಶೇಷ ಭೂತಾರಾಧನೆ ಪುತ್ತೂರಿನಲ್ಲಿ ನಡೆಯುತ್ತದೆ. ಪುತ್ತೂರಿನ ಸಂಪ್ಯದಲ್ಲಿ ತುಳುನಾಡಿನ ಭೂತಾರಾಧನೆಯ ಅಂಗವಾದ ಮೂಕಾಂಬಿಕಾ ಗುಳಿಗ ದೈವದ ನರ್ತನ ಇತ್ತೀಚೆಗೆ ನಡೆಯಿತು. ಬೆಂಕಿಯಲ್ಲೇ ಕುಳಿತು ಮಲಗುವ ಈ ದೈವಗಳ ನರ್ತನ ನೋಡುಗರಲ್ಲಿ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

ಅವೇಶ ಬಂದ ದೈವ ಬೆಂಕಿಯನ್ನು ಬಿಡದೆ, ದೈವದ ಸಹಾಯಕರು ಎಷ್ಟು ಎಳೆದರೂ ಪಟ್ಟು ಬಿಡದೆ ಬೆಂಕಿಯಲ್ಲಿ ಚೆಲ್ಲಾಡಿ ಬೆಂಕಿಯನ್ನೇ ಆಲಿಂಗಿಸುವ ಈ ದೈವಗಳು ತುಳುನಾಡಿನ ವಿಶೇಷ ದೈವಾರಾಧನೆಗಳ ಪೈಕಿ ಒಂದಾಗಿದೆ.
ಪವಾಡಗಳನ್ನು ಬಯಲು ಮಾಡುವ ಹುಲಿಕಲ್ ನಟರಾಜ್ ಗೆ ಈ ದೈವಗಳು ಬೆಂಕಿಯ ಮೇಲೆ ನಡೆಸುವ ನರ್ತನವನ್ನು ಸವಾಲಾಗಿಯೂ ಸ್ವೀಕರಿಸುವಂತೆಯೂ ಕೆಲವರು ದೈವದ ನರ್ತನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.












Click it and Unblock the Notifications