ಸಾಮಾಜಿಕ ನ್ಯಾಯಕ್ಕಾಗಿ ದೇಶದಲ್ಲಿ ಜಾತಿ ಗಣತಿ ನಡೆಯಬೇಕು: ಮಾಜಿ ಸಿಎಂ ವೀರಪ್ಪ ಮೊಯ್ಲಿ
ಮಂಗಳೂರು, ಸೆಪ್ಟೆಂಬರ್ 2: ಶೋಷಿತ ಮತ್ತು ಹಿಂದುಳಿದ ವರ್ಗಗಳ ಜನರ ನೈಜ ಸ್ಥಿತಿಗತಿವನ್ನು ಗುರುತಿಸಲು ಮತ್ತು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಇಡೀ ದೇಶದಲ್ಲಿ ಜಾತಿ ಗಣತಿಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.
ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಕೆ ಪ್ರಮೋದ್ ಕುಮಾರ್ ರೈ ಅವರ 'ಸಮಾನತೆಗಾಗಿ ಸಂಘರ್ಷ' (ಕಮ್ಯುನಿಸ್ಟ್ ನಾಯಕ ಕೃಷ್ಣ ಶೆಟ್ಟಿ ಕುರಿತು) ಮತ್ತು 'ಮಣ್ಣಿಗೆ ಮರಳುವ ಮುನ್ನ' ಪುಸ್ತಕಗಳನ್ನು ಎಂ ವೀರಪ್ಪ ಮೊಯ್ಲಿ, ಮಾಜಿ ಎಂಪಿ ಪಿ ಕರುಣಾಕರನ್ ಮತ್ತು ಲೈಲಾ ಕರುಣಾಕರನ್ ಬಿಡುಗಡೆ ಮಾಡಿದರು.

ಬ್ರಿಟಿಷರು ಭಾರತವನ್ನು ತೊರೆದರೂ ವಸಾಹತುಶಾಹಿ ಮನಸ್ಥಿತಿ ಇನ್ನೂ ಉಳಿದಿದೆ. ಜಮೀನ್ದಾರರು ಜನರನ್ನು ಶೋಷಣೆ ಮಾಡುವುದನ್ನು ಮುಂದುವರೆಸಿದಾಗ ಎ ಕೃಷ್ಣ ಶೆಟ್ಟಿ, ಎ ಕೆ ಗೋಪಾಲನ್, ಎಂ ಕೃಷ್ಣಪ್ಪ ಮತ್ತು ಇತರ ನಾಯಕರು ಭೂರಹಿತ ರೈತರು ಮತ್ತು ಕಾರ್ಮಿಕರಿಗಾಗಿ ಹೋರಾಡಿದರು. ಇವರ ಶ್ರಮದಿಂದ ಲಕ್ಷಾಂತರ ಬಡವರು ಪಟ್ಟಾ ಜಮೀನು ಪಡೆಯಲು ಸಾಧ್ಯವಾಯಿತು. ಈ ನಾಯಕರು ತಮ್ಮ ಪ್ರಾಮಾಣಿಕತೆ ಮತ್ತು ಬದ್ಧತೆಗೆ ಹೆಸರಾಗಿದ್ದರು ಎಂದು ಮೊಯ್ಲಿ ನೆನಪಿಸಿಕೊಂಡರು.
ಎ ಕೃಷ್ಣ ಶೆಟ್ಟಿಯವರ ವಿಚಾರಧಾರೆಗಳು ಅವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿವೆ ಎಂದು ಹೇಳಿದ ಮೊಯ್ಲಿ ಅವರು ಅನಕ್ಷರಸ್ಥರ ಸಾಹಿತ್ಯಕ್ಕಾಗಿ ಶೆಟ್ಟಿ ಶ್ರಮಿಸಿದರು ಎಂದು ಸ್ಮರಿಸಿದರು. ಈ ನಾಯಕರಿಂದ ಸ್ಫೂರ್ತಿ ಪಡೆದು ಕಾಲೇಜುಗಳಲ್ಲಿನ ಕ್ಯಾಪಿಟೇಶನ್ ಶುಲ್ಕದ ವಿರುದ್ಧ ಮತ್ತು ಮದ್ಯದ ಲಾಬಿ ವಿರುದ್ಧ ಆದೇಶವನ್ನು ಜಾರಿಗೊಳಿಸಿದರು ಎಂದು ಮೊಯ್ಲಿ ಹೇಳಿದರು.
ಪ್ರಧಾನ ಭಾಷಣ ಮಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಅವರು, ದೇಶ ನೈತಿಕವಾಗಿ ಸ್ವತಂತ್ರವಾಗಬೇಕಿದೆ. ನಾಗರಿಕ ಸೇವೆಗಳಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ತರುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮಾಜಿ ಎಂಪಿಪಿ ಕರುಣಾಕರನ್, ಲೈಲಾ ಕರುಣಾಕರನ್, ಮಾಜಿ ಐಎಎಸ್ ಅಧಿಕಾರಿ ವಿ ಬಾಲಸುಬ್ರಹ್ಮಣ್ಯನ್, ಮಾಜಿ ಐಎಎಸ್ ಅಧಿಕಾರಿ ಮತ್ತು ಕೇಂದ್ರ ಆಡಳಿತ ನ್ಯಾಯಮಂಡಳಿ ಮಾಜಿ ಸದಸ್ಯ ಸುಧೀರ್ ಕುಮಾರ್, ಮಂಗಳೂರು ವಿವಿ ಪ್ರಭಾರಿ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಮತ್ತು ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜು, ಪ್ರಾಂಶುಪಾಲೆ ಡಾ.ಅನಸೂಯಾ ರೈ ಉಪಸ್ಥಿತರಿದ್ದರು.












Click it and Unblock the Notifications