ಹಲಾಲ್: 'ಭಕ್ತರು ಸೆಗಣಿಯನ್ನಾದರೂ ತಿನ್ನಲಿ, ಗೋಮೂತ್ರವನ್ನಾದರೂ ಕುಡಿಯಲಿ'
ಮಂಗಳೂರು, ಮಾರ್ಚ್ 30: ಚುನಾವಣಾ ವರ್ಷದಲ್ಲಿ ಭಾವೈಕ್ಯತೆಗೆ ಅಡ್ಡಿ ಬರುವ ವಿದ್ಯಮಾನಗಳು ದಿನದಿಂದ ದಿನಕ್ಕೆ ವೇಗವನ್ನು ಪಡೆಯುತ್ತಿದೆ. ಹಿಜಾಬ್ ನಂತರ ಒಂದೊಂದೇ ವಿಚಾರಗಳು ಹೊರಬರುತ್ತಿದ್ದು ಈಗ ಹಲಾಲ್ ವಿಷಯ ಮುನ್ನಲೆಗೆ ಬರುತ್ತಿದೆ.
"ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ಅದರಲ್ಲಿ ತಪ್ಪೇನಿದೆ, ಹಲಾಲ್ ಮಾಂಸ್ ಅವರ ದೇವರಿಗೆ ಪ್ರಿಯವಾಗಿರಬಹುದು ಆದರೆ ನಮ್ಮ ದೇವರಿಗೆ ಎಂಜಲು" ಎಂದು ಬಿಜೆಪಿ ಶಾಸಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದರು. ಆ ಮೂಲಕ, ಹಿಂದೂ ಪರ ಸಂಘಟನೆಗಳ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಸಿ.ಟಿ.ರವಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ಸರ್ವ ಜನಾಂಗದ ಶಾಂತಿ ಮತ್ತು ನಂಬಿಕೆಯ ತೋಟ ಆಗಿರುವ ರಾಜ್ಯವನ್ನು ಹಾಳು ಮಾಡಬೇಡಿ. ನೀವು ರಾಜ್ಯವನ್ನು ಎಲ್ಲಿಗೆ ಕರೆದೊಯ್ಯಲು ಬಯಸುತ್ತೀರಿ. ರಾಜ್ಯದ ಶಾಂತಿಯನ್ನು ಕದಡಬೇಡಿ ಎಂದು ನಾನು ಹಿಂದೂ ಯುವಕರನ್ನು ಕೈಮುಗಿದು ಕೇಳುತ್ತೇನೆ"ಎಂದು ಹೇಳಿದ್ದರು.
ಹಲಾಲ್ ನಿಷೇಧಿಸಬೇಕು ಎನ್ನುವ ವಿಚಾರದಲ್ಲಿ ಮಾತನಾಡುತ್ತಿದ್ದ ಮಂಗಳೂರು ವ್ಯಾಪಾರಿಯೊಬ್ಬರು, "ನಾವು ಹಿಂದೂಗಳನ್ನು ಹಲಾಲ್ ಮಾಂಸ ತಿನ್ನಿ ಎಂದು ಹೇಳಲಿಲ್ಲ. ಅವರು ಬೇಕಾದರೆ ಸೆಗಣಿಯನ್ನೇ ತಿನ್ನಲಿ"ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಸಿ.ಟಿ.ರವಿ ಹೇಳಿಕೆ
"ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿಂದ ಖರೀದಿ ಮಾಡುತ್ತಾರಾ? ಮುಸ್ಲಿಮರ ಅಂಗಡಿಯಲ್ಲೇ ಮಾಂಸ ಖರೀದಿಸಬೇಕು ಎನ್ನುವ ನಿಯಮ ಏನಾದರೂ ಇದೆಯಾ? ಹಲಾಲ್ ಅನ್ನೋದು ಅದೊಂದು ಮುಸ್ಲಿಮರ ಧಾರ್ಮಿಕ ಕ್ರಿಯೆ, ಅದು ಸಹಜವಾಗಿಯೇ ಅವರಿಗೆ ಪ್ರಿಯವಾಗಿರುತ್ತದೆ. ಹಾಗಂತ, ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎನ್ನುವ ಕಾನೂನು ಇದೆಯಾ. ಸಾಮರಸ್ಯ ಎನ್ನುವುದು ಒನ್ ವೇ ಅಲ್ಲ ಅದು ಟೂ ವೇ" ಎಂದು ವಿಧಾನಸೌಧದಲ್ಲಿ ಸಿ.ಟಿ.ರವಿ ಹೇಳಿದ್ದರು.

ಈ ಗತಿಗೆಟ್ಟ ಸರಕಾರ ಇದನ್ನೆಲ್ಲಾ ಮಾಡುತ್ತಿದೆ
ಹಲಾಲ್ ನಿಷೇಧ ಮುನ್ನಲೆಗೆ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ವ್ಯಾಪಾರಿಯೊಬ್ಬರು, "ಬ್ರಾಹ್ಮಣರ ಉದ್ದೇಶವನ್ನು ಪೋಷಿಸಲು ಸಂಘ ಪರಿವಾರದವರು ಸರಕಾರದ ಪರೋಕ್ಷ ಸಹಕಾರದೊಂದಿಗೆ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಸಾಧನೆ ಇಲ್ಲದೇ ಇರುವುದರಿಂದ ಈ ಗತಿಗೆಟ್ಟ ಸರಕಾರ ಇದನ್ನೆಲ್ಲಾ ಮಾಡುತ್ತಿದೆ. ಅಘೋಷಿತ ಹಿಂದೂ ರಾಷ್ಟ್ರವನ್ನು ಮಾಡಲು ಬಿಜೆಪಿ ಮಾಡುತ್ತಿರುವ ಹುನ್ನಾರವಿದು"ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಸಾವಿರಾರು ವರ್ಷಗಳಿಂದ ನಾವೆಲ್ಲಾ ಹಲಾಲ್ ಮಾಂಸವನ್ನು ತಿನ್ನುತ್ತಿದ್ದೇವೆ
"ಸಾವಿರಾರು ವರ್ಷಗಳಿಂದ ನಾವೆಲ್ಲಾ ಹಲಾಲ್ ಮಾಂಸವನ್ನು ತಿನ್ನುತ್ತಿದ್ದೇವೆ, ಹಿಂದೂಗಳಿಗೆ ಇದನ್ನೇ ತಿನ್ನಬೇಕು ಎಂದು ಒತ್ತಡ ಯಾರೂ ಹೇರಲಿಲ್ಲ. ಅವರು ಬೇಕಾದರೆ, ಸೆಗಣಿಯನ್ನೇ ತಿನ್ನಲಿ, ಗೋಮೂತ್ರವನ್ನೇ ಕುಡಿಯಲಿ, ನಮಗೇನು ಅಭ್ಯಂತರವಿಲ್ಲ. ಆಹಾರ ಎನ್ನುವುದು ಅವರವರ ಹಕ್ಕು, ಧಾರ್ಮಿಕ ವಿಚಾರಗಳಿಗೆ ಕೈಹಾಕಿ ಸರಕಾರ ನಡೆಸಲಾಗುತ್ತಿದೆ. ಇದು ಸಾಂವಿಧಾನಿಕ ರಾಷ್ಟ್ರಕ್ಕೆ ದೊಡ್ಡ ಕೊಡಲಿ ಪೆಟ್ಟನ್ನು ನೀಡುತ್ತಿದೆ"ಎಂದು ಮಂಗಳೂರಿನಲ್ಲಿ ವ್ಯಾಪಾರಿಯೊಬ್ಬರು ಟಿವಿ9 ಜೊತೆ ಮಾತನಾಡುತ್ತಾ ಸಿಟ್ಟನ್ನು ಹೊರಹಾಕಿದ್ದಾರೆ.

ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ಪ್ರಮಾಣ ಪತ್ರವನ್ನ ನೀಡುತ್ತದೆ
ಹಿಂದೂ ಜನಜಾಗೃತಿ ಸಮಿತಿ ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಧ್ವನಿ ಎತ್ತಿದೆ. ಏನಿದು ಹಲಾಲ್? ಇದೊಂದು ಅರೇಬಿಕ್ ಪದ, ಇಸ್ಲಾಂ ಧರ್ಮದಲ್ಲಿ ಪರಿಶುದ್ಧ ಆಹಾರವನ್ನು ಹಲಾಲ್ ಎಂದು ಕರೆಯಲ್ಪಡುತ್ತದೆ. ಇದರ ಪ್ರಕಾರ, ಪ್ರಾಣಿಗಳನ್ನು ವಧೆ ಮಾಡುವ ಸಮಯದಲ್ಲಿ ಅದು ಜೀವಂತ ಮತ್ತು ಆರೋಗ್ಯವಾಗಿರಬೇಕು. ಕತ್ತಿನ ಕೇಳಭಾಗದ ನರವನ್ನು ಮೊದಲು ಕೊಯ್ದು, ರಕ್ತವು ಮೃತ ದೇಹದಿಂದ ಖಾಲಿಯಾಗಿರಬೇಕು. ಹಲಾಲ್ ಮಾಡುವವನು ಮುಸ್ಲಿಂ ಆಗಿರಬೇಕು ಮತ್ತು ಇದಕ್ಕಾಗಿ ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ಪ್ರಮಾಣ ಪತ್ರವನ್ನ ನೀಡುತ್ತದೆ.












Click it and Unblock the Notifications