'ಸುಳ್ಳುಗಾರ ಯಡಿಯೂರಪ್ಪ, ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ'
ಜೆಡಿಎಸ್ ಮುಖಂಡ-ಶಾಸಕ ಮಧು ಬಂಗಾರಪ್ಪ ಮಂಗಳೂರಿನಲ್ಲಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಕುಮಾರ ಬಂಗಾರಪ್ಪ, ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನ ತರಾಟೆಗೆ ತೆಗೆದುಕೊಂಡಿದ್ದಾರೆ
ಮಂಗಳೂರು, ಮಾರ್ಚ್ 4: ಕುಮಾರಸ್ವಾಮಿ ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬರುತ್ತಿದೆ. ಅವರು ಶ್ವಾಸಕೋಶ ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ವಿನಾ ಯಾವುದೇ ಹೃದಯ ಕಾಯಿಲೆ ಅವರಿಗಿಲ್ಲ. ವೈದ್ಯರು ನಾಲ್ಕು ದಿನ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಜಿಡಿಎಸ್ ಮುಖಂಡ-ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಎಲ್ಲ ಕಡೆ ಸೋತವರು ಬಿಜೆಪಿಗೆ ಸೇರುತ್ತಿದ್ದಾರೆ. ಬಿಜೆಪಿ ಸೇರುತ್ತಿರುವವರಲ್ಲಿ ಜನಪ್ರತಿನಿಧಿಗಳು ಇಲ್ಲ. ಒಂದರ್ಥದಲ್ಲಿ ತುಕ್ಕು ಹಿಡಿದವರು ಬಿಜೆಪಿಗೆ ಹೋಗಿದ್ದಾರೆ. ನನ್ನ ಅಣ್ಣ ಕುಮಾರ ಬಂಗಾರಪ್ಪ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದವರು ಎಂದು ಟೀಕಿಸಿದರು.[ಎಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು, ವೈದ್ಯರು ಹೇಳಿದ್ದೇನು?]

ಅದೇ ರೀತಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕೂಡ ಚುನಾವಣೆಯಲ್ಲಿ ಸೋತವರು. ಅಣ್ಣ ಕಾಂಗ್ರೆಸ್ ಕೈ ಕಡಿದಿದೆ ಎಂದಿದ್ದಾರೆ. ಇನ್ನು ಬಿಜೆಪಿ ಆತನ ಕಾಲು ಕಡಿಯಲಿದೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು, ಇನ್ನು ಯಡಿಯೂರಪ್ಪ ಅವರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಯಾವ ನೈತಿಕತೆ ಹೊಂದಿದ್ದಾರೆ? ಅವರ ವಿರುದ್ಧವೇ ಎಷ್ಟೋ ಪ್ರಕರಣಗಳು ದಾಖಲಾಗಿವೆ. ಯಡಿಯೂರಪ್ಪ ಒಬ್ಬ ಸುಳ್ಳುಗಾರ ಎಂದು ದೂರಿದರು.
ಬಿಜೆಪಿಗಿಂತ ದೊಡ್ಡ ಕೋಮುವಾದಿ ಕಾಂಗ್ರೆಸ್ ಎಂದು ಟೀಕಿಸಿದ ಅವರು, ನನಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಹ್ವಾನ ಬಂದಿದೆ. ಆದರೆ ನನಗೆ ಕಾಂಗ್ರೆಸ್ ಗೆ ಹೋಗುವ ಯೋಚನೆ ಇಲ್ಲ. ಅಂತಹ ದುರಾಸೆ ಇಲ್ಲ ಎಂದು ಹೇಳಿದರು. ಇನ್ನು ಡೈರಿ ಬಿಡುಗಡೆ ವಿಚಾರದ ಬಗ್ಗೆ ಸರಿಯಾಗಿ ತನಿಖೆ ನಡೆಯಬೇಕು. ಆಗ ಮಾತ್ರ ಸತ್ಯಾಸತ್ಯತೆ ಅರಿವಾಗುವುದು ಎಂದರು.[ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ]
ಇಂದು ಪಶ್ಚಿಮ ಘಟ್ಟ ಉಳಿದಿದ್ದರೆ ಅದು ಯಾವ ಪಕ್ಷ ಅಥವಾ ಸಂಘಟನೆಯಿಂದಲ್ಲ. ಅಲ್ಲಿರುವ ಸ್ಥಳೀಯರಿಂದ ಮಾತ್ರ. ಇಂದು ಪಶ್ಚಿಮ ಘಟ್ಟ ಸುರಕ್ಷಿತವಾಗಿದೆ. ನನಗೆ ತಿಳಿದ ಮಟ್ಟಿಗೆ ಅದೆಷ್ಟೋ ಸ್ಥಳೀಯರು ಮನೆಯ ಹಿಂದೆ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಕಣ್ಗಾವಲು ಇಟ್ಟಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications