ಮಂಗಳೂರಿಗೆ ಬರಲಿದೆ ಕೇರಳ ಮಾದರಿಯ ಬೋಟ್ ಹೌಸ್, ತೇಲುವ ರೆಸ್ಟೋರೆಂಟ್
ಮಂಗಳೂರು, ಡಿಸೆಂಬರ್ 17: ಕೇರಳ ಪ್ರವಾಸೋದ್ಯಮದ ಮಾದರಿಯಲ್ಲೇ ಕರಾವಳಿಯ ಪ್ರವಾಸೋದ್ಯಮವನ್ನೂ ಅಭಿವೃದ್ಧಿಗೊಳಿಸಲಯ ನಕಾಶೆ ಸಿದ್ದಗೊಳ್ಳುತ್ತಿದೆ. ಕರಾವಳಿಯ ಸುಂದರ ಕಡಲತೀರ ಮತ್ತು ಹಿನ್ನೀರಿನಲ್ಲಿ ವಿಶ್ವ ದರ್ಜೆಯ ಜಲಕ್ರೀಡೆ ಮತ್ತು ಆಕರ್ಷಕ ಬೋಟ್ ಹೌಸ್, ತೇಲುವ ರೆಸ್ಟೋರೆಂಟ್‌ಗೆ ಉತ್ತೇಜನ ನೀಡಲು ಯೋಜನೆ ಸಿದ್ದಗೊಂಡಿದೆ.
ಸಮುದ್ರ ಮತ್ತು ನದಿ ತೀರ ಅಭಿವೃದ್ಧಿಗೆ ಕೋಸ್ಟಲ್ ಸರ್ಕ್ಯೂಟ್ ಸ್ವದೇಶಿ ದರ್ಶನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ 25 ಕೋಟಿ ರೂಪಾಯಿ ವೆಚ್ಚದ ಯೋಜನೆ ಮಂಜೂರಾಗಿದೆ. ಈ ಯೋಜನೆಯಡಿ ಮಂಗಳೂರು ಹೊರವಲಯದ ತಣ್ಣೀರುಬಾವಿ ಕಡಲ ತೀರ ಮತ್ತು ಸಸಿಹಿತ್ಲು ಕಡಲ ತೀರವನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಮಂಗಳೂರು ಹೇಳಿ ಕೇಳಿ ತಳುನಾಡಿನ ಪಾರಂಪರಿಕ ಆಹಾರ ಖಾದ್ಯಕ್ಕೆ ಹೆಸರುವಾಸಿ. ತುಳುನಾಡಿ ರುಚಿಕರ ಖಾದ್ಯಗಳಿಗೆ ಮನಸೋಲದವರಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ರೆಸ್ಟೋರೆಂಟ್, ಹೊಟೇಲ್ ಗಳಲ್ಲಿ ತುಳುನಾಡಿನ ಖಾದ್ಯಗಳನ್ನು ಸವಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಸಮುದ್ರದ ಅಲೆಗಳ ಮೇಲೆ ತೇಲುತ್ತಾ ತುಳುನಾಡಿನ ಖಾದ್ಯಗಳನ್ನು ಕ್ರೂಸ್ ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡಲಾಗಿದೆ.

ಸದ್ಯ ಮಂಗಳೂರನಲ್ಲಿ ಹಳೆ ಬಂದರು ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಚಿಕ್ಕ ಕ್ರೂಸ್ ರೆಸ್ಟೋರೆಂಟ್‌ಗಳಿವೆ. ಈಗ ಹೆಚ್ಚುವರಿಯಾಗಿ ಮತ್ತೆ 3 ಕ್ರೂಸ್ ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡಲಾಗಿದೆ. ಇದರ ಜತೆಗೆ ಕೇರಳ ಮಾದರಿಯ 3 ಹೌಸ್ ಬೋಟ್‌ಗಳಿಗೆ ಪರವಾನಗಿ ನೀಡಲಾಗಿದೆ.ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಗುರುಪುರ ನದಿಯ ಕೂಳೂರು ಬ್ರಿಡ್ಜ್ ಆಸುಪಾಸಿನಲ್ಲಿ ವಾಟರ್ ಸ್ಪೋರ್ಟ್ಸ್, ಕ್ರೂಸ್ ರೆಸ್ಟೋರೆಂಟ್, ಹೌಸ್‌ಬೋಟ್‌ಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.

ಜಲ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಸೂಕ್ತ ಜೆಟ್ಟಿ ಮತ್ತು ಮೂಲಸೌಕರ್ಯಗಳೊಂದಿಗೆ ಕ್ರೂಸ್ ರೆಸ್ಟೋರೆಂಟ್ ಮತ್ತು ಜಲಕ್ರೀಡೆಗೆ ಪೂರಕವಾಗುವಂತೆ ಸುಲ್ತಾನ್ ಬತ್ತೇರಿ, ಬೇಂಗ್ರೆ, ಕೂಳೂರು ಬ್ರಿಡ್ಜ್ ಸಮೀಪ ತೇಲುವ ಜೆಟ್ಟಿ ನಿರ್ಮಾಣವಾಗಲಿದೆ. ಪ್ರವಾಸಿಗರು ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ, ಲೈಫ್ ಗಾರ್ಡ್ ವಾಚ್ ಟವರ್, ತ್ಯಾಜ್ಯ ನಿರ್ವಹಣೆ, ಸ್ನಾನ ಗೃಹ, ಬೀಚ್ ಕಣ್ಗಾವಲು ವಾಹನ ಮತ್ತು ತಂಡ, ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ, ಸಾರ್ವಜನಿಕ ಮೂಲಸೌಕರ್ಯ ಒದಗಿಸಲಾಗುತ್ತಿದೆ.












Click it and Unblock the Notifications