ಪಕ್ಷ ಭೇದ ಮರೆತು ಬೆಂಬಲ ನೀಡಿ: ಕಾಂಗ್ರೆಸ್‌ನ ರಕ್ಷಿತ್ ಶಿವರಾಂ ಪರ ಕರೆ ಕೊಟ್ಟ ಬಿಜೆಪಿ ಶಾಸಕ
ಮಂಗಳೂರು, ಮಾರ್ಚ್11: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಭಾರೀ ಅಂತರದಲ್ಲಿ ಸೋಲು ಕಂಡಿರುವ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಹೀಗಾಗಿ ಭರ್ಜರಿ ಸಿದ್ಧತೆ ಕೂಡ ಆರಂಭವಾಗಿದೆ.
ಬಿಜೆಪಿ ಭದ್ರಕೋಟೆ ಕರಾವಳಿಯಲ್ಲೂ ಲೋಕಸಭಾ ಚುನಾವಣೆ ತಯಾರಿ ಜೋರಾಗಿದೆ. ಸದ್ಯ ಬಿಜೆಪಿ ಭದ್ರಮುಷ್ಠಿಯಲ್ಲಿರುವ ಕರಾವಳಿಯ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸೆಣಸಾಡುತ್ತಿದೆ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಲೆಕ್ಕಾಚಾರ ನಡೆಯುತ್ತಿದೆ. ಇತ್ತ ಬಿಜೆಪಿ ಕೂಡ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಿದ್ಧವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್‌ನ ರಕ್ಷಿತ್ ಶಿವರಾಂ ಅವರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸೋತಿರುವ ಬಗ್ಗೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಭೇದ ಮರೆತು ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.
ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಮಾವೇಶದಲ್ಲಿ ಮಾತನಾಡಿದ ಉಮನಾಥ್ ಕೋಟ್ಯಾನ್, ಚುನಾವಣೆ ಎದುರಿಸುವ ಬಿಲ್ಲವ ಅಭ್ಯರ್ಥಿಗಳಿಗೆ ಪಕ್ಷ ಭೇದ ಮರೆತು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಪಕ್ಷ ಯಾವುದಾದರೂ ಪರವಾಗಿಲ್ಲ ಬಿಲ್ಲವ ಅಭ್ಯರ್ಥಿಗಳನ್ನು ಗೆಲ್ಲಿಸಿ ಎನ್ನುವ ರೀತಿಯಲ್ಲಿ ಕರೆ ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ಬಿಲ್ಲವ ಅಭ್ಯರ್ಥಿ ರಕ್ಷಿತ್ ಶಿವರಾಂ ಚುನಾವಣೆ ಎದುರಿಸಿ ಸೋತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವರೇ ಇರುವಾಗ ರಕ್ಷಿತ್ ಯಾಕೆ ಸೋತಿದ್ದಾರೆ..? ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಕೊಡುವುದಕ್ಕೆ ನಿಮಗೆ ಧೈರ್ಯ ಬರುವುದಿಲ್ಲ. ಬಿಜೆಪಿ ಉಮಾನಾಥ್ ಕೋಟ್ಯಾನ್ ಹತ್ರ ಮಾತನಾಡಿದ್ರೆ ನನ್ನ ಪಕ್ಷದವರು ಏನಾದ್ರೂ ಹೇಳ್ತಾರಾ ಎಂಬ ಭಯ. ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಹತ್ರ ಮಾತನಾಡಿದ್ರೆ ಏನಾದರೂ ತೊಂದರೆಯಾಗುತ್ತದೆ ಎಂಬ ಭಯ. ಇಂತಹ ಹಿಂಜರಿಕೆ ಇಟ್ಟುಕೊಂಡರೆ ಬಿಲ್ಲವ ಸಮಾಜ ಕಟ್ಟಲು ಹೇಗೆ ಸಾಧ್ಯ.? ಎಂದು ಪ್ರಶ್ನಿಸಿದ್ದಾರೆ.

ಅದ್ಯಾಕೆ ಬಿಲ್ಲವ ಸಮಾಜದವರಿಗೆ ಈ ಹಿಂಜರಿಕೆ..? ಚುನಾವಣೆ ಎದುರಿಸುವ ನಮ್ಮ ಜನಪ್ರತಿನಿಧಿಗಳಿಗೆ ಬಿಲ್ಲವ ಸಮಾಜ ಎಷ್ಟು ನೈತಿಕ ಬೆಂಬಲ ನೀಡುತ್ತದೆ ಎನ್ನುವುದು ಮುಖ್ಯ. ಯಾವುದೇ ರಾಜಕೀಯ ಪಕ್ಷವಿರಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲಾ ಬಿಲ್ಲವ ಸಮೂದಾಯದ ಜನಪ್ರತಿನಿಧಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications