Mangaluru: ಪಾಕ್ ಪರ ಘೋಷಣೆ: ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಬಿಜೆಪಿ ಕಾರ್ಯಕರ್ತರ ಯತ್ನ: ಬಂಧನ
ಮಂಗಳೂರು, ಬ್ರವರಿ 28: ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಚಾರಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಸಿಡೆದೆದ್ದಿದೆ. ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ಈ ವೇಳೆ ಹೈಡ್ರಾಮಾವೇ ನಡೆಯಿತು.
ಕಾಂಗ್ರೆಸ್ ನಾಯಕರ ಬೆಂಬಲಿತ ವಿಧಾನಸೌಧದಲ್ಲೇ ಪಾಕಿಸ್ತಾನ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದರು. ಅವರೆಲ್ಲರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ: ಬಂಧನ
ಈ ವೇಳೆ ಹೈಡ್ರಾಮಾವೇ ನಡೆಯಿತು. ಧಿಕ್ಕಾರ ಕೂಗುತ್ತಾ ಕಚೇರಿಯತ್ತ ಗುಂಪು ಗುಂಪಾಗಿ ಬಂದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಹರಸಾಹಸ ಪಟ್ಟರು. ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಂಡು ಕಚೇರಿಯಿಂದ ಧಿಕ್ಕಾರ ಕೂಗುತ್ತಲೇ ಕಾರ್ಯಕರ್ತರು ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಒಬ್ಬರೊಬ್ಬರನ್ನು ಹಿಡಿದು ಪೊಲೀಸರು ಬಂಧಿಸಿದರು.
ಸ್ಥಳದಲ್ಲಿ ಖುದ್ದು ಕದ್ರಿ ಠಾಣೆ ಪೋಲೀಸ್, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅವರು ಹಾಜರಿದ್ದರು. ಕಚೇರಿ ಮುಂದೆ ಬ್ಯಾರಿಕೇಡ್ ಹಾಕಲಾಗಿತ್ತು. ಕಚೇರಿಗೆ ನುಗ್ಗದಂತೆ ಎಲ್ಲ ಕ್ರಮ ವಹಿಸಿದ್ದರು.
ಮುತ್ತಿಗೆ ಯತ್ನ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ನೂಕಾಟ, ಮಾತಿನ ಚಕಮಕಿ ನಡೆಯಿತು. ಈ ಪ್ರತಿಭಟನೆಯ ಕಾರ್ಯಕರ್ತರು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗದಂತೆ ಪೊಲೀಸರು ತಡೆಯುವಲ್ಲಿ ಯಶಸ್ವಿಯಾದರು. ಪೊಲೀಸರ ಈ ಬಂಧನ ನಡೆಯನ್ನು ಬಿಜೆಪಿ ಕಾರ್ಯಕರ್ತರು ಖಂಡಿಸಿದರು.

ದೇಶ ಭಕ್ತರನ್ನು ಬಂಧಿಸಿದ ಸರ್ಕಾರ: ಕಾರ್ಯಕರ್ತರ ಕಿಡಿ
ದೇಶದ್ರೋಹ ಕೆಲಸ ಮಾಡಿದವನನ್ನು ಬಂಧಿಸದ ಕಾಂಗ್ರೆಸ್ ಸರ್ಕಾರ, ದೇಶಭಕ್ತರನ್ನು ಬಂಧಿಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೊಶ ಹೊರ ಹಾಕಿದರು. ಈ ಸರ್ಕಾರ ದೇಶಭಕ್ತರ ವಿರುದ್ಧವಿದೆ ಎಂದು ದೂರಿದರು. ಬಿಜೆಪಿ ಭಾವುಟ ಹಿಡಿದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದ ಕಾರ್ಯಕರ್ತರನ್ನು ಬಂಧಿಸಿ ಸ್ಥಳದಲ್ಲಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸುವಲ್ಲಿ ಸಫಲವಾದರು. ಸದ್ಯ ಮಂಗಳೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗುತ್ತಿದೆ.
ಕಠಿಣ ಶಿಕ್ಷೆಗೆ ಬಿಜೆಪಿ ಆಗ್ರಹ
ನೆನ್ನೆ ಮಂಗಳವಾರ ರಾಜ್ಯಸಭೆಗೆ ಚುನಾವಣೆ ನಡೆಯಿತು. ಈ ವೇಳೆ ಕಾಂಗ್ರೆಸ್ ನ ನಾಸಿರ್ ಹುಸೆನ್‌ಗೆ ಗೆಲುವು ಧಕ್ಕಿದೆ. ಈ ವೇಳೆ ವಿಧಾನಸೌಧದಲ್ಲಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಈ ವೇಳೆ ನಾಸಿರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಬಿಜೆಪಿ ನಾಯಕರು ಆರೋಪಿಸಿದ್ದು, ಕಠಿಣ ಶಿಕ್ಷೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸದ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.












Click it and Unblock the Notifications