ಟ್ವೀಟ್ ವೈರಲ್: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಕಾರ್ಯಕರ್ತರ ಕ್ಲಾಸ್
ಮಂಗಳೂರು, ಏಪ್ರಿಲ್ 14: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ವೇಳೆ ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈಗ ಮತ್ತೆ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕೋಮು ಸೂಕ್ಷ್ಮ ಪ್ರದೇಶಕ್ಕೆ ಸೂಕ್ತ ಅಭ್ಯರ್ಥಿ ಬೇಕೆಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದ್ದು, ಆದರೆ ಜಾತಿ ಲೆಕ್ಕಾಚಾರದಲ್ಲಿ ಪುತ್ತೂರಿನವರಿಗೆ ಟಿಕೆಟ್ ನೀಡದೇ, ಸುಳ್ಯ ತಾಲೂಕಿಗೆ ಸೇರಿದ ಮಹಿಳೆಗೆ ಟಿಕೆಟ್ ನೀಡಿದ್ದಾರೆ. ಇದರ ಹಿಂದೆ ಯಾರೂ ಬೆಳೆಯಬಾರದೆಂಬ ಷಡ್ಯಂತ್ರ ಇದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದು, ಕಾರ್ಯಕರ್ತರೂ ಈ ಬಾರಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ಅಂತಿಮ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದರು.
ಇನ್ನೊಂದೆಡೆ ಬಿಜೆಪಿಯ ಯುವ ಮುಖಂಡ ಕಿಶೋರ್ ಬೊಟ್ಯಾಡಿ ಅವರ ಹೆಸರೂ ಚಾಲ್ತಿಯಲ್ಲಿತ್ತು.ಆದರೆ ಕೊನೆ ಕ್ಷಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ಲಭ್ಯವಾಗಿದ್ದು,ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಟಿಕೆಟ್ ವಂಚಿತ ಎರಡೂ ನಾಯಕರು ಕಾರ್ಯಕರ್ತರ ನಾಯಕರಾಗಿದ್ದು ,ಟಿಕೆಟ್ ಸಿಕ್ಕಿದ್ದರೆ ದೊಡ್ಡ ನಾಯಕರಾಗಿ ಬೆಳೆಯುತ್ತಿದ್ದರು.ಇದನ್ನು ಸಹಿಸಲಾಗದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರ ಬಹು ಒತ್ತಾಯದ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ. ಸೋಮವಾರ ಚುನಾವಣಾ ಸ್ಪರ್ಧೆಗೆ ಅರುಣ್ ಕುಮಾರ್ ಪುತ್ತಿಲ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಇನ್ನೊಂದೆಡೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿರುವುದನ್ನು ಉಲ್ಲೇಖಿಸಿ ಮಾಡಿರುವ ಟ್ವೀಟ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
'ದಲಿತೋದ್ಧಾರ ಎಂಬುದು ಬಿಜೆಪಿಗೆ ಭಾಷಣದ ಸರಕಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಆದಿದ್ರಾವಿಡ ಸಮುದಾಯದ ಓರ್ವ ಮಹಿಳೆ, ಮಹಿಳಾ ಮೋರ್ಚಾದ ಸಾಮಾನ್ಯ ಕಾರ್ಯಕರ್ತೆ 'ಭಾಗೀರತಿ ಮರುಲ್ಯ'ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಎಲ್ಲವೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ' ಎಂದು ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ವ್ಯಾಪಕ ಟ್ರೋಲ್ ಗುರಿಯಾಗಿದ್ದು, ಕೆಲ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮೀಸಲು ಕ್ಷೇತ್ರದಲ್ಲಿ ದಲಿತರಿಗಲ್ಲದೆ ಸಾಮಾನ್ಯರಿಗೆ ಟಿಕೆಟ್ ನೀಡಲು ಆಗುತ್ತದೆಯೇ? ಮೀಸಲು ಕ್ಷೇತ್ರದಲ್ಲಿ ಪಕ್ಷೇತರ ನಿಂತರೂ ದಲಿತರೇ ನಿಲ್ಲಬೇಕು, ಅದನ್ನು ದಲಿತೋದ್ಧಾರ ಎಂದು ಬಿಂಬಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಒಬ್ಬರು 'ನಿಮ್ಮ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು ದಲಿತೋದ್ಧಾರ ಮಾಡಿ' ಎಂದಿದ್ದಾರೆ.
'ಅದು ಮೊದಲಿನಿಂದಲೇ ಮೀಸಲಾತಿ ಕ್ಷೇತ್ರ, ಅದರಲ್ಲಿ ನೀವೇನು ಆಯ್ಕೆ ಮಾಡುವುದು. ಮೀಸಲಾತಿ ಇಲ್ಲದ ಕ್ಷೇತ್ರದಲ್ಲಿ ಇಂತಹ ಅಭ್ಯರ್ಥಿ ನಿಲ್ಲಿಸಿ ನೋಡೋಣಾ' ಎಂದು ಮತ್ತೊಬ್ಬರು ಹೇಳಿದ್ದಾರೆ. 'ಸುಳ್ಯ ಮೀಸಲು ಕ್ಷೇತ್ರ ಸ್ವಾಮಿ, ಅಲ್ಲಿ ಮತ್ತೆ ಶೆಟ್ರುಗಳನ್ನು ನಿಲ್ಲಿಸಲಾಗುತ್ತದೆಯೇ' ಎಂದು ಪ್ರಶ್ನಿಸಿದ್ದಾರೆ.
ಇನ್ನು ಒಬ್ಬರು 'ಭಾಗೀರಥಿ ಮುರುಳ್ಯ' ಅವರ ಹೆಸರಿನಲ್ಲಿರುವ ಊರಿನ ಹೆಸರನ್ನು ತಪ್ಪಾಗಿ 'ಭಾಗೀರತಿ ಮರುಲ್ಯ' ಎಂದು ತಪ್ಪಾಗಿ ಬರೆದಿರೋದಕ್ಕೆ ಜಾಡಿಸಿದ್ದಾರೆ. 'ಯೋ ಡಾಲರ್ ಅಣ್ಣಾ ಮೊದಲು ನಿಮ್ಮ ಕ್ಷೇತ್ರದ ಊರಿನ ಹೆಸರನ್ನು ಸರಿಯಾಗಿ ತಿಳಿದುಕೋ ಆಮೇಲೆ ಪುಂಗುವಿಯಂತೆ. ಅದು ಮರುಲ್ಯ ಅಲ್ಲಾ "ಮುರುಳ್ಯ" ಮತ್ತೇ ಇವರು ಸಾಮಾನ್ಯ ಕಾರ್ಯಕರ್ತರಲ್ಲ 5 ವರ್ಷ ಜಿಲ್ಲಾ ಪಂಚಾಯತ್ 5 ವರ್ಷ ತಾಲೂಕು ಪಂಚಾಯತ್ ಸದಸ್ಯರಾಗಿದ್ದರು.' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications