ಜಯಮಾಲ ರಾಹುಲ್ ಗಾಂಧಿಗೆ ಮೊದಲು ಬಜೆ ಕಳುಹಿಸಿಕೊಡಲಿ:ಸಿಟಿ ರವಿ
ಮಂಗಳೂರು, ಏಪ್ರಿಲ್ 22: ಸಚಿವೆ ಜಯಮಾಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಜಯಮಾಲ ನನ್ನ ನಾಲಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಗೆ ಏನು? ಎಂದು ಕಿಡಿಕಾರಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಮಾಲ ನನ್ನ ನಾಲಗೆಗೆ ಬಜೆ ಸರಿಯಾಗಿ ತಿಕ್ಕಿಲ್ಲ ಅಂತ ಹೇಳಿದ್ದಾರೆ. ನಾನು ಸ್ಪಷ್ಟ ಕನ್ನಡ ಮಾತನಾಡುತ್ತೇನೆ. ವಿಶ್ವೇಶ್ವರಯ್ಯ, ಕನಕದಾಸ ಹೆಸರು ಸರಿ ಹೇಳದ ರಾಹುಲ್ ಗಾಂಧಿ ನಾಲಗೆಗೆ ಬಜೆ ತಿಕ್ಕಿಸಿ. ರಾಹುಲ್ ಗಾಂಧಿ ಅವರಿಗೆ ಮೊದಲು ಬಜೆ ಕಳುಹಿಸಿಕೊಡಿ ಎಂದು ವ್ಯಂಗ್ಯವಾಡಿದರು.
ಸಚಿವೆ ಜಯಮಾಲ ಕಳುಹಿಸಿದ ಪುಸ್ತಕಗಳನ್ನು ಸ್ವೀಕರಿಸುತ್ತೇನೆ ಎಂದ ರವಿ ಅವರು, ಕಾಂಗ್ರೆಸ್ ನಾಯಕರಿಗೆ ಜಯಮಾಲ ಮೊದಲು ಸಭ್ಯತೆಯ ಕ್ಲಾಸ್ ತೆಗೆದುಕೊಳ್ಳಲಿ. ಸಿಎಂ ಇಬ್ರಾಹಿಂ, ಸಿದ್ಧರಾಮಯ್ಯರನ್ನು ಕೂರಿಸಿ ಪಾಠ ಮಾಡಲಿ. ಬಣ್ಣದ ಬದುಕಿನವರದ್ದು ಒಳಗೊಂದು-ಹೊರಗೊಂದು ವೇಷ. ಜಯಮಾಲ ಕ್ಲಾಸ್ ತೆಗೆದುಕೊಳ್ಳೋದಾದ್ರೆ ನಾನು ಸಂಪನ್ಮೂಲ ವ್ಯಕ್ತಿಯನ್ನು ಕಳುಹಿಸಿಕೊಡುತ್ತೇನೆ ಎಂದರು.

ಶ್ರೀಲಂಕಾದಲ್ಲಿ ಉಗ್ರರ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಎಸೆಯಬೇಕಾಗಿದೆ. ದೇಶದ ಸುರಕ್ಷತೆ ಕಾಂಗ್ರೆಸ್ ಗಿಂತ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಉತ್ತಮವಾಗಿದೆ. ಪ್ರಧಾನಿ ಮೋದಿ ಕೈಯ್ಯಲ್ಲಿ ದೇಶ ಸುಭದ್ರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ನಿಯಂತ್ರಣವಿಲ್ಲದಂತಾಗುತ್ತದೆ. ಸೈನ್ಯದ ಪರಮಾಧಿಕಾರವನ್ನು ಹಿಂಪಡೆಯುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿಂಪಡೆಯಬೇಕು. ದೇಶದ ಜನರ ಎದುರು ಕ್ಷಮೆ ಕೇಳಬೇಕು ಎಂದು ರವಿ ಒತ್ತಾಯಿಸಿದರು.
ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗಾಗಿ ಬೀದಿಗಿಳಿದಿದ್ದಾರೆ. ಇದರಿಂದಲೇ ತಿಳಿಯುತ್ತೆ ಇವರ ನಿಯತ್ತು. ಭಯೋತ್ಪಾದನೆಯ ಬೇರನ್ನು ಕಿತ್ತೆಸೆಯಲು ಎಲ್ಲಾ ದೇಶಗಳು ಒಗ್ಗಟ್ಟಾಗಬೇಕು ಎಂದು ಸಿಟಿ ರವಿ ಕರೆ ನೀಡಿದರು.












Click it and Unblock the Notifications