ಬಿಜೆಪಿ ಸಚಿವರಿಗೆ ಶಾಸಕರು ಬ್ರೋಕರ್‌ಗಳು: ಪ್ರಿಯಾಂಕ್ ಖರ್ಗೆ
ಮಂಗಳೂರು, ಸೆಪ್ಟೆಂಬರ್, 06: "ಭ್ರಷ್ಟಾಚಾರದಲ್ಲಿ ಬಿಜೆಪಿಯ ಸಚಿವರಿಗೆ ಬಿಜೆಪಿಯ ಶಾಸಕರೇ ಬ್ರೋಕರ್‌ಗಳಾಗಿದ್ದಾರೆ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ಕಮಿಷನ್‌ನಲ್ಲಿ ಮಾತ್ರ ಆಸಕ್ತಿ ಇದೆ. ಯೋಗೇಶ್ವರ್, ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ಸೇರಿದಂತೆ ಹಲವು ಸಚಿವರು ಬಿಜೆಪಿ ವಿರುದ್ಧವೇ ಟೀಕೆ ಮಾಡುತ್ತಿದ್ದಾರೆ" ಎಂದರು.
"ಕೆ.ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ v/s ಬಿಜೆಪಿ ಜಗಳವಾಗುತ್ತಿದೆ. ಬಿಜೆಪಿ ಗೂಂಡಾಗಳನ್ನು ಬೆಳೆಸುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಂದರೆ ಹಲಾಲ್, ಜಟ್ಕಾ ಬಗ್ಗೆ ಮಾತನಾಡುತ್ತಾರೆ" ಎಂದು ಟೀಕಿಸಿದರು.

"ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಕಾಶ್ಮೀರ್ ಫೈಲ್ ನೋಡಿದ್ದೀರಾ? ಅಂತಾ ಕೇಳುತ್ತಾರೆ. ಬಿಜೆಪಿ ಶಾಸಕರು ಸಚಿವರ ಭ್ರಷ್ಟಾಚಾರದ ಬ್ರೋಕರ್‌ಗಳಾಗಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ; "ಬಿಜೆಪಿಯವರು ಎಬಿವಿಪಿ ಹೆಸರಿನಲ್ಲಿ ಗೂಂಡಾಗಳನ್ನು ಬೆಳೆಸುತ್ತಿದ್ದಾರೆ. ಕರಾವಳಿಯಲ್ಲಿ ನಳಿನ್ ಕುಮಾರ್ ಕಟೀಲ್ ಪವರ್ ಫುಲ್ ಎಂದು ಭಾವಿಸಿದ್ದೆ. ಆದರೆ ಇಲ್ಲಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮೊನ್ನೆ ಮಂಗಳೂರಿಗೆ ಬಂದಿರುವ ಮೋದಿ ಅವರು ವೇದಿಕೆಯಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರನ್ನು ಹೇಳಿಯೇ ಇಲ್ಲ. ನಮ್ಮ ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುವ ಅವರು ಬಿಜೆಪಿ ವಿರುದ್ಧ ಮಾತನಾಡಿದ ಅವರದ್ದೇ ಪಕ್ಷದವರಿಗೆ ಒಂದಾದರೂ ನೋಟಿಸ್ ನೀಡಿದ್ದಾರೆಯೇ?" ಎಂದು ಪ್ರಶ್ನಿಸಿದರು.
"ಬಿಜೆಪಿಯ ನಾಯಕರ ಎಷ್ಟು ಜನ ಮಕ್ಕಳು ಗೋಶಾಲೆಯಲ್ಲಿ ಕೆಲಸ ಮಾಡುತ್ತಾರೆ?. ಎಷ್ಟು ಜನ ಬಿಜೆಪಿ ಎಂಎಲ್‌ಎಗಳು ಗೋ ಮೂತ್ರವನ್ನು ಕುಡಿಯುತ್ತಾರೆ?. ಬಡವರು, ಹಿಂದುಳಿದ ಮಕ್ಕಳಿಗೆ ಕೇಸರಿ ಶಾಲ್ ಹಾಕಿ ಧರ್ಮ ರಕ್ಷಣೆಗೆ ಕಳುಹಿಸುತ್ತಾರೆ. ಮಾತೆತ್ತಿದ್ದರೆ ಯುಪಿ ಮಾಡೆಲ್ ಎಂದು ಹೇಳುತ್ತಾರೆ. ಆದರೆ ಯುಪಿಯ ವಾರಣಾಸಿಯ ಲೇಸರ್ ಶೋಗೆ ದುಡ್ಡು ಕಟ್ಟುತ್ತಿರೋದು ಕರ್ನಾಟಕದವರು. ದಕ್ಷಿಣ ಕನ್ನಡ ಜಿಲ್ಲೆಯ ಯುವಕರೇ ಬಿಜೆಪಿ, ಆರ್‌ಎಸ್‌ಎಸ್ ಬಲೆಗೆ ಬಿಳುವುದಕ್ಕೆ ಹೋಗಬೇಡಿ. ಅರ್ಥ ಇಲ್ಲದ ಧರ್ಮದ ಹಿಂದೆ ಹೋಗದಿರಿ" ಎಂದು ಕಿವಿಮಾತು ಹೇಳಿದರು.

ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ; "ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ. ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ ಆಗುತ್ತಿದೆ. ಮೊನ್ನೆ ಮೋದಿ ಅವರು ಮಂಗಳೂರಿಗೆ ಬಂದಾಗ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುತ್ತಾರೆ ಎಂಬ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ನಾರಾಯಣ ಗುರುಗಳ ಪೀಠ ಹಾಗೂ ನಿಗಮ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆಯನ್ನೂ ಈಡೇರಿಸಿಲ್ಲ. ಬಿಜೆಪಿ ಸರ್ಕಾರ ನಾರಾಯಣ ಗುರುಗಳಿಗೆ ಪದೇ ಪದೇ ಅವಮಾನ ಮಾಡುತ್ತಿದೆ. ನಾರಾಯಣ ಗುರುಗಳ ಹೆಸರಿನಲ್ಲಿ ವೋಟ್ ಪಡೆಯುವ ಬಿಜೆಪಿ ಶಾಸಕ, ಸಚಿವರು, ಅನ್ಯಾಯ ಆದಾಗ ಮಾತ್ರ ಬಾಯಿ ಮುಚ್ಚಿಕೊಳ್ಳುತ್ತಾರೆ" ಎಂದು ಕಿಡಿಕಾರಿದರು.
"ಬಿಜೆಪಿ ನಾಯಕರು ಬಡವರ ಮಕ್ಕಳನ್ನು ಹೋರಾಟಕ್ಕೆ ಬಿಟ್ಟು ಕುಳಿತುಕೊಂಡು ನೋಡುತ್ತಾರೆ. ತಮ್ಮ ಮಕ್ಕಳನ್ನು ಮಾತ್ರ ಯಾವುದೇ ಸಂಘಟನೆಗಳಲ್ಲಿ ಭಾಗಿ ಆಗಲು ಬಿಡುವುದಿಲ್ಲ. ಇವರಿಗಾದರೆ ಮಕ್ಕಳು, ಬೇರೆಯವರಿಗೆ ಮಕ್ಕಳಲ್ಲವಾ?. ರಾಜ್ಯದಲ್ಲಿ ಯಾವುದೇ ಹೋರಾಟಗಳು ನಡೆದರೂ ಅಲ್ಲಿ ಬಡವರ ಮಕ್ಕಳನ್ನೇ ಬಲಿಪಶುಗಳನ್ನಾಗಿ ಮಾಡುತ್ತಾರೆ" ಎಂದು ಬಿಜೆಪಿ ಸರ್ಕಾರದ ವಿರುದ್ದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications