ಪುತ್ತೂರು ವಿಚಾರ ಕೇಂದ್ರಕ್ಕೆ ತಲುಪಿದೆ, 15 ದಿನದೊಳಗೆ ನಿರೀಕ್ಷಿಸಿದ ಬದಲಾವಣೆ ಆಗಲಿದೆ- ಯತ್ನಾಳ್
ಮಂಗಳೂರು,ಮೇ 19: ಪುತ್ತೂರಿನಲ್ಲಿ ಬ್ಯಾನರ್ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಆರೋಗ್ಯ ವಿಚಾರಣೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಭೇಟಿ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡುವ ಮೊದಲು ಆರ್‌ಎಸ್‌ಎಸ್ ಕಾರ್ಯಾಲಯ ಪಂಚವಟಿಗೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಸಂಘದ ಪ್ರಮುಖರನ್ನು ಭೇಟಿಯಾದ ಬಳಿಕ ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆ ಗೆ ಭೇಟಿ ನೀಡಿದ್ದಾರೆ.

ಬಸನಗೌಡ ಯತ್ನಾಳ್ ಅವರನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಸ್ಪತ್ರೆ ಬಳಿ ಬರಮಾಡಿಕೊಂಡಿದ್ದಾರೆ. ಯತ್ನಾಳ್ ಭೇಟಿ ಸಂದರ್ಭದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಥಳೀಯ ಯುವ ಮುಖಂಡ ಮತ್ತು ಪುತ್ತಿಲ ಪರ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ.
ಕಾರ್ಯಕರ್ತರು ಇರುವ ಕೊಠಡಿಯೊಳಗೆ ಯತ್ನಾಳ್ ಭೇಟಿ ನೀಡುವ ಸಂಧರ್ಭದಲ್ಲಿ ಸ್ಥಳೀಯ ಯುವ ಮುಖಂಡ ಅಜಿತ್ ರೈ ಕೂಡಾ ಭೇಟಿ ನೀಡಲು ಯತ್ನಿಸಿದ್ದು, ಈ ವೇಳೆ ಪುತ್ತಿಲ ಪರ ಬೆಂಬಲಿಗರು ಅಜಿತ್ ರೈ ಕೊಠಡಿ ಒಳ ಪ್ರವೇಶಿಸಲು ಅವಕಾಶ ನೀಡಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಎದುರಲ್ಲೇ ನೂಕಿ ಕೊಠಡಿಯಿಂದ ಅಜಿತ್ ರೈಯನ್ನು ಹೊರ ಹಾಕಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಕಾರ್ಯಕರ್ತರನ್ನು ನೋಡಿ ಯತ್ನಾಳ್ ದಿಗ್ಭ್ರಮೆಗೊಂಡಿದ್ದಾರೆ. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರಿನಲ್ಲಿ ನಮ್ಮವರ ಮೇಲೆ ನಮ್ಮವರಿಂದಲೇ ದಾಳಿ ನಡೆಯುತ್ತಿದೆ. ಹೀಗಾದರೆ ಸಂಘ, ಪಕ್ಷ, ಸಂಘಟನೆ ಎಲ್ಲಿದೆ. ನೀವೇ ನಮ್ಮ ಕಾರ್ಯಕರ್ತರ ಜೊತೆ ನಿಲ್ಲಬೇಕು ಎಂದು ಭಾವುಕರಾಗಿದ್ದಾರೆ.

ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಪುತ್ತೂರಿನ ಜನರ ಮನಸ್ಸಿನ ಭಾವನೆ ಕೇಂದ್ರವನ್ನು ತಲುಪಿದೆ. ಇನ್ನೂ ಹದಿನೈದು ದಿನದೊಳಗೆ ನಿಮ್ಮ ಮನಸ್ಸಿನಲ್ಲಿರೋದೇ ಜಾರಿಯಾಗಲಿದೆ. ಪುತ್ತೂರಿನ ಘಟನೆಯ ಬಗ್ಗೆ ವಾಸ್ತವಿಕ ತನಿಖೆಯಾಗಬೇಕು. ಊಹಾಪೋಹಗಳನ್ನು ಮಾಡಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೋಲೀಸರು ಕಾನೂನು ಪ್ರಕಾರ ಕೆಲಸ ಮಾಡಲಿ. ಯಾರೋ ಒತ್ತಡ ಹಾಕಿದರೆಂದು ಈ ರೀತಿ ಕೆಲಸ ಮಾಡಬಾರದು ಎಂದರು.
ಇನ್ನು ಪೊಲೀಸರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಲಾ ಒಂದು ಲಕ್ಷ ರೂಪಾಯಿ ಚಿಕಿತ್ಸೆಗೆ ನೀಡುವ ಭರವಸೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೊಂಚ ಅಸಮಾಧಾನ ಎದ್ದಿದೆ. ಹಿಂದೂ ಕಾರ್ಯಕರ್ತರು ಪಕ್ಷೇತರರ ಜೊತೆ ಹೋಗಿದ್ದಾರೆ. ಹಾಗೆಂದು ಅವರು ಬಿಜೆಪಿ ಕಾರ್ಯಕರ್ತರೇ. ಗೊಂದಲವನ್ನು ಸರಿ ಮಾಡುವ ಕೆಲಸವನ್ನು ಕೇಂದ್ರ ನಾಯಕರು ಮಾಡಲಿದ್ದಾರೆ. ಈ ವಿಚಾರವನ್ನು ಕೇಂದ್ರ ನಾಯಕರಿಗೆ ಮುಟ್ಟಿಸುವ ಕೆಲಸ ಮಾಡುವೆ. ಸ್ವಪ್ರತಿಷ್ಠೆಗಾಗಿ ಈ ರೀತಿಯ ಗೊಂದಲಕ್ಕೆ ಅವಕಾಶವಿಲ್ಲ. ತಪ್ಪು ಮಾಡಿದ್ದರೆ ಕ್ಷಮೆ ಕೇಳಿ ಮುಂದೆ ನಡೆಯಬೇಕು. ಇದು ಎರಡೂ ಕಡೆಯವರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.
ಹಿಂದೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ನ ತಾಲೀಬಾನ್ ಸರಕಾರ ನಾಳೆಯಿಂದ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್‌ನ ಅಧಿಕಾರದಲ್ಲಿದ್ದಾಗ ಗೋರಕ್ಷಕರ ಹತ್ಯೆ, ಕಾರ್ಯಕರ್ತರ ಹತ್ಯೆ ನಡೆದಿದೆ. ಇದೀಗ ಮತ್ತೆ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ದೇಶದಲ್ಲಿ ಹಿಂದೂಗಳ ರಕ್ಷಣೆ ಬಿಜೆಪಿಯ ಕರ್ತವ್ಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.












Click it and Unblock the Notifications