ಅಧಿಕಾರಿಗಳು ಮರ್ಯಾದೆ ನೀಡುತ್ತಿಲ್ಲ-ದಕ್ಷಿಣ ಕನ್ನಡ ಬಿಜೆಪಿ ಶಾಸಕರ ಆಕ್ರೋಶ
ಮಂಗಳೂರು, ಆಗಸ್ಟ್ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಮರ್ಯಾದೆ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಬಿಜೆಪಿ ಶಾಸಕರಿಗೆ ಅಧಿಕಾರಿಗಳು ಮರ್ಯಾದಿಯೇ ನೀಡುತ್ತಿಲ್ಲ ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದ.ಕ ಜಿಲ್ಲಾಡಳಿತದ ವಿರುದ್ಧ ಧರಣಿಗೆ ಬಿಜೆಪಿ ಶಾಸಕರ ನಿರ್ಧಾರ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ದ.ಕ ಜಿಲ್ಲಾಡಳಿತ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಡುತ್ತಿದೆ. ಇದರಿಂದ ಶಾಸಕರ ಹಕ್ಕಿನ ನಿರಂತರ ಚ್ಯುತಿಯಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಕ್ಕು ಚ್ಯುತಿಯಾಗಿದೆ. ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟರೂ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಡಿಸಿ ಕಛೇರಿಯ ಪ್ರೊಟೋಕಾಲ್ ಪ್ರಕಾರವೇ ಕಾರ್ಯಕ್ರಮ ಆಯೋಜಿಸಿದರೂ ಕಡೇ ಕ್ಷಣದಲ್ಲಿ ಕಾರ್ಯಕ್ರಮ ರದ್ದು ಮಾಡಲಾಗುತ್ತಿದೆ. ಮೇಲಾಧಿಕಾರಿಗಳ ಸೂಚನೆ ಇದೆ ರದ್ದು ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆಗಸ್ಟ್ 14ರಂದು ಡಿಸಿ ಕಛೇರಿ ಮುಂಭಾಗ ಧರಣಿ ಮಾಡುತ್ತೇವೆ ಎಂದು ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್, ದ.ಕ ಜಿಲ್ಲಾಡಳಿತ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ಶಾಸಕರ ಹಕ್ಕಿನ ನಿರಂತರ ಚ್ಯುತಿಯಾಗ್ತಿದೆ. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಕ್ಕು ಚ್ಯುತಿಯಾಗುತ್ತಿದೆ. ಜುಲೈ 31ರಂದು ಮೂಡಬಿದಿರೆಯ ಇರುವೈಲ್ ಗ್ರಾ.ಪಂ ಕಟ್ಟಡ ಉದ್ಘಾಟನೆ ಇತ್ತು. ಇದಕ್ಕೆ ಡಿಸಿ ಕಚೇರಿ ಪ್ರೊಟೋಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಅಚ್ಚಾಗಿತ್ತು. ಉದ್ಘಾಟನೆಗೆ ಎರಡು ದಿನ ಇರುವಾಗ ಕಾರ್ಯಕ್ರಮ ರದ್ದಿಗೆ ಸೂಚನೆ ಬಂದಿದೆ. ಅಲ್ಲದೇ ಸಂಜೆ ಹೊತ್ತಿಗೆ ಮೂಡಬಿದಿರೆ ಇಓ ದಯಾವತಿ ಮತ್ತು ಪಿಡಿಓ ಕಾಂತಪ್ಪ ಅಮಾನತ್ತಾಗಿದೆ. ಹೀಗಾಗಿ ಸುದ್ದಿಗೋಷ್ಟಿ ಮಾಡಿ ಅಮಾನತು ರದ್ದು ಮಾಡಲು ಆಗ್ರಹಿಸಿದ್ದೆ ಎಂದರು.
ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಬಂದಾಗಲೂ ಈ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೆ. ಆಗ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೆಸರು ಹಾಕಿಲ್ಲ, ಶಿಷ್ಟಾಚಾರ ಉಲ್ಲಂಘನೆ ಎಂದು ಹೇಳಿದ್ದರು. ಹಾಗಿದ್ದರೆ ಈ ವಿಚಾರದಲ್ಲಿ ದ.ಕ ಜಿಲ್ಲಾಧಿಕಾರಿ ಅಮಾನತು ಮಾಡಿ ಎಂದೆ. ರಾಜ್ಯದ ಅಷ್ಟೂ ಗ್ರಾ.ಪಂ ಕಾರ್ಯಕ್ರಮಗಳಿಗೆ ಸಚಿವ ಹೆಸರು ಹಾಕಲು ಆಗುತ್ತಾ?. ಇದೊಂದು ಸೇಡಿನ ರಾಜಕಾರಣ, ಇದರಲ್ಲಿ ಪ್ರೊಟೋಕಾಲ್ ಉದ್ದೇಶ ಇಲ್ಲ ಎಂದು ಆರೋಪಿಸಿದರು.

ಆಗಸ್ಟ್ 8 ರಂದು ನಾನು ಮತ್ತೆ ಉದ್ಘಾಟನೆಗೆ ಹೋದಾಗ ಪೊಲೀಸರನ್ನು ಹಾಕಿದ್ದರು. ಆದರೂ ನಾನು ಅಲ್ಲಿಗೆ ಹೋಗಿ ದೀಪ ಹಚ್ಚಿ ವಾಪಾಸ್ ಬಂದೆ. ಒಬ್ಬ ಸ್ಥಳೀಯ ಶಾಸಕನಿಗೆ ಪೊಲೀಸ್ ಬಳಸಿ ಹಕ್ಕು ಚ್ಯುತಿ ಮಾಡಲಾಗಿದೆ. ಸರಿಯಾಗಿ ನ್ಯಾಯೋಚಿತವಾಗಿ ನಮಗೆ ಕೆಲಸ ಮಾಡಲು ಬಿಡಿ. ಸಿಎಂ ಸೂಚನೆ ಕೊಟ್ಟರೂ ಜಿಲ್ಲೆಯ ಅಧಿಕಾರಿಗಳು ಕ್ಯಾರೇ ಅಂತಿಲ್ಲ. ನಮ್ಮ ಕೆಲಸ ಮಾಡಲು ಬಿಡುತ್ತಿಲ್ಲ, ಸಿಎಂಗೆ ಪತ್ರ ಬರೆದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಇಂಥಹ ಘಟನೆಗಳು ನಡೆದಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಸಕರಿಗೆ ಸಂವಿಧಾನಬದ್ಧ ಕೆಲಸ ಮಾಡುವ ಹಕ್ಕಿದೆ. ಸಿದ್ದರಾಮಯ್ಯ, ಗುಂಡೂರಾವ್ ಬಂದಾಗಲೂ ಅವರಿಗೆ ಮಾಹಿತಿ ಕೊಡಲಾಗಿದೆ. ಡಿಸಿ ಕಚೇರಿ ಪ್ರೋಟೋಕಾಲ್ ಪ್ರಕಾರವೇ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಹೀಗಿದ್ದರೂ ಜಿಲ್ಲೆಯ ಅಧಿಕಾರಿಗಳು ಹಕ್ಕು ಚ್ಯುತಿ ಮಂಡನೆ ಮಾಡಲಾಗುತ್ತಿದೆ ಎಂದರು.
ಸಿಎಂ ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಕ್ಯಾರೇ ಅಂತಿಲ್ಲ. ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಭಯಪಡುತ್ತಿದ್ದಾರೆ. ಜಿಲ್ಲೆಯಲ್ಲಿ ಆಡಳಿತದ ಅಜಾಗರೂಕತೆ ತಾಂಡವವಾಡುತ್ತಿದೆ. ಶಾಸಕರ ಹಕ್ಕು ರಕ್ಷಣೆ ಮಾಡಲು ನಮಗೆ ಬೇರೆ ದಾರಿಯಿಲ್ಲ. ನಾವು ಮುಂದಿನ ಮೂರು ದಿನ ಸಿಎಂ ಹಾಗೂ ಪ್ರಿಯಾಂಕ್ ಖರ್ಗೆಯವರಿಗೆ ಗಡುವು ಕೊಡುತ್ತೇವೆ. ಆಗಸ್ಟ್ 14ರ ಒಳಗೆ ಭರವಸೆ ಸಿಗದೇ ಇದ್ದರೆ ಡಿಸಿ ಕಚೇರಿ ಎದುರು ಧರಣಿ ಮಾಡುತ್ತೇವೆ ಎಂದು ಹೇಳಿದರು.
ಪಿಡಿಓ ಮತ್ತು ಇಓ ಅಮಾನತು ವಾಪಾಸ್ ಪಡೆಯಬೇಕು. ನಮ್ಮ ಶಾಸಕರಿಗೆ ಕೆಲಸ ಮಾಡಲು ಬಿಡಬೇಕುಇಲ್ಲದಿದ್ದರೆ ಆಗಸ್ಟ್14ರಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ಶಾಸಕನಿಗೆ ಗ್ರಾ.ಪಂ ಕಟ್ಟಡಕ್ಕೆ ಹೋಗಲು ನಿರ್ಬಂಧಿಸ್ತಾರೆ.
ಇಂತಹ ಘಟನೆ ಸರ್ವಾಧಿಕಾರಿ ಧೋರಣೆ, ಇದು ಆಗಬಾರದು. ಗ್ರಾಮೀಣಾಭಿವೃದ್ಧಿ ಸಚಿವರು ಕೂಡ ಈ ವಿಚಾರದಲ್ಲಿ ಗಮನ ಹರಿಸಲಿ. ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲು ಸಿಎಂ, ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ. ತಕ್ಷಣ ಪಿಡಿಓ, ಇಓ ಅಮಾನತು ತಕ್ಷಣ ರದ್ದು ಮಾಡಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.












Click it and Unblock the Notifications