ಕಾಂಗ್ರೆಸ್ಸಿಗರೇ,ಆರೋಪಿಗಳ ಪರ ನಿಲ್ಲದಿರಿ: ಕೃಷ್ಣ ಪಾಲೆಮಾರ್
ಮಂಗಳೂರು, ಡಿಸೆಂಬರ್, 10: ಕಾಂಗ್ರೆಸ್ ಜನಪ್ರತಿನಿಧಿಗಳು ಸಮಾಜ ಅಭಿವೃದ್ದಿ ಕಡೆ ಗಮನಹರಿಸದೆ ಪೊಲೀಸ್ ಇಲಾಖೆ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಸಾಕ್ಷಾಧಾರ ಸಹಿತ ಬಂಧಿಸಿದರೂ, ಠಾಣೆಗೆ ತರುವ ಮೊದಲೇ ಸಚಿವರು, ಶಾಸಕರು ಬಿಡುಗಡೆ ಮಾಡಲು ಪೊಲೀಸ್ ಅಧಿಕಾರಿಗಳ ಒತ್ತಡ ತರುತ್ತಾರೆ. ಇದು ನಾಚಿಕೆಗೇಡಿನ ಕೆಲಸ ಎಂದು ಬಿಜೆಪಿ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಹಸ್ತಕ್ಷೇಪದಿಂದ ಅಹಿತಕರ ಘಟನೆ ಸಂಭವಿಸುತ್ತಿದೆ. ರಾಜಕೀಯ ಹಸ್ತಕ್ಷೇಪವೇ ಜಿಲ್ಲೆಯ ಕಾನೂನು ಅವ್ಯವಸ್ಥೆಗೆ ಪ್ರಮುಖ ಕಾರಣ ಎಂದು ಕಿಡಿಕಾರಿದ್ದಾರೆ.[ಗಲಾಟೆ ಮಾಡ್ಕೊಂಡು ಸದನದ ಅಮೂಲ್ಯ ಸಮಯ ಹಾಳ್ ಮಾಡ್ಬೇಡಿ]

ಕೋಮು ಗಲಭೆ ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ವಿರುದ್ಧವೇ ಇಲಾಖೆ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳ ತಾಳಕ್ಕೆ ಕುಣಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಮೋದ್ ಕುಮಾರ್ ವಿಚಾರದಲ್ಲಿ ರಾಜಕೀಯ ಕುತಂತ್ರವಿದೆ ಎಂದು ತಿಳಿದ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ತಮ್ಮ ಕೆಲಸ ತೊರೆದು ಪ್ರಮೋದ್ ವರ್ಗಾವಣೆ ಹಿಂದಕ್ಕೆ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಪ್ರಮೋದ್ ವಿಚಾರಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ. ಇದು ಉತ್ತಮ ಬೆಳವಣಿಗೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ಎಲ್ಲೆಡೆ ಪ್ರತಿಭಟನೆ ನಡೆಯುವ ಮರುಕಳಿಸಬಹುದು. ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರ ತಾಳಕ್ಕೆ ಕುಣಿಯುವುದನ್ನು ಬಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಪಾಲೆಮಾರ್ ಆಗ್ರಹಿಸಿದ್ದಾರೆ.












Click it and Unblock the Notifications