ವ್ಯಕ್ತಿ ಹಿಂದುತ್ವ ದೊಡ್ಡದಾ ? ಬಿಜೆಪಿ ಹಿಂದುತ್ವ ದೊಡ್ಡದಾ? : ಪುತ್ತಿಲ ವಿರುದ್ಧ ಪ್ರಭಾಕರ್ ಭಟ್ ಕಿಡಿ
ಮಂಗಳೂರು, ಮೇ 04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಹಿಂದುತ್ವದ ನಡುವಿನ ಯುದ್ಧ ಜೋರಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಸ್ವಂತ ಊರಿನಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ
ಪುತ್ತೂರುನ ನರಿಮೊಗರಿನ ಪುತ್ತಿಲದಲ್ಲಿ ಬಿಜೆಪಿ ಭಾರತಮಾತಾ ಪೂಜನಾ ಕಾರ್ಯಕ್ರಮ ನಡೆಸಿ ಸಂಘಟನಾ ಶಕ್ತಿಯನ್ನು ತೋರಿಸಿದೆ. ಸಾವಿರಾರು ಮಂದಿ ಕಾರ್ಯಕರ್ತರು ಭಾರತಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಸೇರಿದಂತೆ ಹಿಂದೂ ಮುಖಂಡರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಪಕ್ಷದ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಅವರ ಹೆಸರು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲಗೆ ನಾಚಿಗೆ ಆಗಬೇಕು. ಪಕ್ಷದ ಕಾರ್ಯಕರ್ತರು ನಾಯಕರು ತಪ್ಪು ಮಾಡಿದರೆ ಅವರನ್ನು ತಿದ್ದೋಕೆ ಪಕ್ಷದ ವರಿಷ್ಠರು ಸಂಘ ಇದೆ. ಆದರೆ ಅರುಣ್ ಕುಮಾರ್ ಪುತ್ತಿಲಗೆ ಈಗ ಅಸ್ತಿತ್ವವೇ ಇಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಹಿಂದುತ್ವದ ಹೆಸರು ಹೇಳಿ ಪುತ್ತಿಲ ಮತಯಾಚನೆ ಮಾಡುತ್ತಿದ್ದಾರೆ. ಹಿಂದುತ್ವದ ಹೆಸರು ಹೇಳಿ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮುನ್ನ ನೀವೂ ಯೋಚನೆ ಮಾಡಬೇಕಿತ್ತು, ಇದು ನಿಮಗೆ ನಾಚಿಕೆ ಅಲ್ಲವಾ? ನೀವು ಈಗಲೇ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದು, ಮುಂದೆ ಹೇಗೆ? ಬಿಜೆಪಿಯ ಹಿಂದುತ್ವ ದೊಡ್ಡದಾ? ಸಂಘದ ಹಿಂದುತ್ವ ದೊಡ್ಡದಾ? ಅಥವಾ ವ್ಯಕ್ತಿಯ ಹಿಂದುತ್ವ ದೊಡ್ಡದಾ ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ ಎಂದು ಪ್ರಭಾಕರ್ ಭಟ್ ಕಲ್ಲಡ್ಕ ವಾಗ್ದಾಳಿ ನಡೆಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಊರಿನಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ ಹಮ್ಮಿಕೊಂಡಿದ್ದು, ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಪುತ್ತಿಲ ಅವರಿಗೆ ಸೆಡ್ಡು ಹೊಡೆದು ಅವರ ಊರಿನಲ್ಲೇ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಬಿಜೆಪಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದು, ಬೈಕ್ ರ್ಯಾಲಿ ಮೂಲಕ ಆಗಮಿಸಿದ್ದರು.
ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತನ್ನ ಪ್ರಚಾರವನ್ನು ಮುಂದುವರಿಸಿದ್ದಾರೆ. ಮಹಿಳೆಯರನ್ನು ಸೆಳೆಯಲು ಪುತ್ತಿಲ ಸೀತಾ ಪರಿವಾರ ಎಂಬ ಸಮಾವೇಶ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಪುತ್ತೂರು ನಗರ ಚಾಲಕರನ್ನು ಉದ್ದೇಶಿಸಿ ಸಾರಥಿ ಸಮಾವೇಶವನ್ನು ಮಾಡಿದ್ದು, ನೂರಾರು ಚಾಲಕರು ಅರುಣ್ ಕುಮಾರ್ ಪುತ್ತಿಲಗೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆಗೆ ಖರ್ಚು ವೆಚ್ಚಕ್ಕೆ ಹಣದ ಸಹಾಯವನ್ನು ಪುತ್ತಿಲ ಜನರಲ್ಲಿ ಕೋರಿದ್ದು, ಆಟೋ ಚಾಲಕರು ಸುಮಾರು ಒಟ್ಟು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಮಾಡಿ ಅರುಣ್ ಕುಮಾರ್ ಪುತ್ತಿಲಗೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications