ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕನಸಿನ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ
ಮಂಗಳೂರು, ನವೆಂಬರ್, 02: ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕನಸಾಗಿದ್ದ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದೆ. ಮುಂದಿನ ವರ್ಷದ ಮೇ ತಿಂಗಳಿನೊಳಗೆ ಈ ಮನೆಯ ಗೃಹಪ್ರವೇಶವೂ ನಡೆಯಲಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿದ್ದ ಪ್ರವೀಣ್ ಕುಟುಂಬದ ಹಳೆ ಮನೆಯನ್ನು ಕೆಡವಲಾಗಿದೆ. ಅದೇ ಜಾಗದಲ್ಲಿ ಹೊಸ ಮನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ.
ಸಮಾರಂಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್. ಅಂಗಾರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಮುಖಂಡರು ಭಾಗಿ ಆಗಿದ್ದರು.
ಜುಲೈ 26ರಂದು ತನ್ನ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರವೀಣ್ ಮೇಲೆ ಮೂವರು ತಲವಾರು ಬೀಸಿ ಹತ್ಯೆಗೈದಿದ್ದರು. ಪ್ರವೀಣ್ ಹತ್ಯೆ ಪ್ರಕರಣ ಇಡೀ ದೇಶದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪ್ರಕರಣವನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು.
ಈ ಸಂಬಂಧ ಎನ್‌ಐಎ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ತಂಡ ರಚಿಸಿ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಪ್ರಕರಣ ನಡೆದ ಬಳಿಕ ಇಡೀ ದೇಶದಲ್ಲಿ ಪಿಎಫ್ಐ ಸಂಘಟನೆಗೆ ಸೇರಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ.
Bhoomi pooja ceremony was conducted of murdered #BJP Yuva Morcha leader #PraveenNettaru's home at Bellare. At a cost of Rs. 55 lakh his home is being constructed. Party president @nalinkateel was present for the event. #Karnataka pic.twitter.com/NzSAzt6NXk
— Imran Khan (@KeypadGuerilla) November 2, 2022

ಪ್ರವೀಣ್ ಹತ್ಯೆ, NIAಯಿಂದ ತನಿಖೆ
ಪಿಎಫ್ಐ ಸಂಘಟನೆಯನ್ನು ದೇಶಾದ್ಯಂತ ನಿಷೇಧ ಮಾಡಲಾಗಿದೆ. ಈಗಾಗಲೇ ಎನ್‌ಐಎ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕಾರ್ಯ ಮುಂದುವರೆಸಿದ್ದಾರೆ. ಪ್ರವೀಣ್ ಹತ್ಯೆಯಲ್ಲಿ ನೇರವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ಭಾಗಿಯಾಗಿದ್ದರೂ ಅಂತಹವರನ್ನು ಬಂಧಿಸಬೇಕು ಎಂದು ಸರ್ಕಾರಕ್ಕೂ ಒತ್ತಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ನಳಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮನೆ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚ
ಪ್ರವೀಣ್ ನೆಟ್ಟಾರು ಪಕ್ಷದ ಕಾರ್ಯಕರ್ತರಾಗಿದ್ದರು. ಆತನಿಗಿದ್ದ ಹೊಸ ಮನೆಯ ಕನಸನ್ನು ನನಸು ಮಾಡಲು ಪಕ್ಷ ಸಿದ್ಧವಾಗಿದೆ. ಬಿಜೆಪಿ ಪಕ್ಷದ ವತಿಯಿಂದ ಈಗಾಗಲೇ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡಲಾಗಿದೆ. ಸರ್ಕಾರದಿಂದಲೂ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಅಲ್ಲದೇ ಪ್ರವೀಣ್ ನೆಟ್ಟಾರು ಕಾರ್ಯಾಚರಿಸುತ್ತಿದ್ದ ಯುವ ಮೋರ್ಚಾದಿಂದ 15 ರೂಪಾಯಿಗಳ ಪರಿಹಾರ ನೀಡಲಾಗಿದೆ. ಇದೀಗ ಮನೆ ಕಟ್ಟುವ ಜವಾಬ್ದಾರಿಯನ್ನೂ ಪಕ್ಷ ತೆಗೆದುಕೊಂಡಿದೆ. ಸುಮಾರು 40 ರಿಂದ 50 ಲಕ್ಷ ರೂಪಾಯಿ ಅಂದಾಜಿನಲ್ಲಿ ಸುಮಾರು 2,700 ಸ್ಕ್ವೇರ್ ಫೀಟ್ ಮನೆ ನಿರ್ಮಾಣ ಆಗಲಿದೆ. ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿ ಕೊಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಭರವಸೆ ನೀಡಿದರು.

ಜನರಿಗೆ ಮನವಿ ಮಾಡಿದ ಪ್ರವೀಣ್ ಪತ್ನಿ
ಪ್ರವೀಣ್ ನೆಟ್ಟಾರು ಸಾವಿನ ಬಳಿಕ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿದೆ. ಹತ್ಯೆಯ ಹಿಂದೆ ಇರುವ ಉಳಿದ ಆರೋಪಿಗಳು ಇನ್ನು ಪತ್ತೆ ಆಗಿಲ್ಲ. ಮನೆಯವರಿಗೆ ಸಹಕಾರ ಮಾಡಿದಂತೆ, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಿಸಲು ಸಮಾಜ ಕೈಜೋಡಿಸಬೇಕಿದೆ ಎಂದು ಪ್ರವೀಣ್ ಪತ್ನಿ ನೂತನ್ ಮನವಿ ಮಾಡಿದರು.

ಆರೋಪಿಗಳಿಗೆ ಜಾಮೀನು ಸಿಗಬಾರದು
ಪ್ರವೀಣ್ ಹಂತಕರು ಯಾವ ರೀತಿ ನಮ್ಮ ಮಗನನ್ನು ಕೊಂದಿದ್ದಾರೆಯೋ ಅದೇ ರೀತಿಯ ಶಿಕ್ಷೆ ಆರೋಪಿಗಳಿಗೆ ಆಗಬೇಕಿದೆ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ಸಿಗದಂತೆ ಮಾಡಿದರೆ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದು ಪ್ರವೀಣ್ ಪೋಷಕರು ಮನವಿ ಮಾಡಿದರು. ಈ ನಡುವೆ ಪ್ರವೀಣ್ ಹತ್ಯೆ ಹಿಂದೆ ಇರುವ ಆರೋಪಿಗಳ ಬಂಧನಕ್ಕೆ ಎನ್‌ಐಎ ಈಗಾಗಲೇ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ. ನಾಲ್ಕು ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ನೀಡಲು ತನಿಖಾ ಸಂಸ್ಥೆ ಮುಂದಾಗಿದೆ.












Click it and Unblock the Notifications