'ಕಿಸ್ ಆಫ್ ಲವ್', ಪ್ರಣವಾನಂದ ಶ್ರೀ ಎಚ್ಚರಿಕೆ
ಮಂಗಳೂರು, ನ.21 : 'ಕಿಸ್ ಆಫ್ ಲವ್'ನಲ್ಲಿ ಪಾಲ್ಗೊಳ್ಳುವವರು ಮಾನಸಿಕ ಅಸ್ವಸ್ಥರಿಗೆ, ಎಚ್‌ಐವಿ ಪೀಡಿತರಿಗೆ ಮುತ್ತು ಕೊಡಲಿ ಎಂದು ಭಾರತೀಯ ಕ್ರಾಂತಿ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ. 'ಕಿಸ್ ಆಫ್ ಲವ್'ನಲ್ಲಿ ಪಾಲ್ಗೊಳ್ಳುವವರ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಣವಾನಂದ ಸ್ವಾಮೀಜಿಯವರು, 'ಕಿಸ್ ಆಫ್ ಲವ್'ನಲ್ಲಿ ಪಾಲ್ಗೊಳ್ಳುವವರ ವಿರುದ್ಧ ಪ್ರತಿಭಟನೆ ನಡೆಸಲು ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ. ಅಂದು ನೂರಾರು ಕಾರ್ಯಕರ್ತರೊಂದಿಗೆ ಬೆಂಗಳೂರಿಗೆ ತೆರಳಿ 'ಕಿಸ್ ಆಫ್ ಲವ್'ನಲ್ಲಿ ಪಾಲ್ಗೊಳ್ಳುವವರ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. [ಬಗೆಹರಿಯದ ಕಿಸ್ ಆಫ್ ಲವ್ ಆಯೋಜನೆ ಗೊಂದಲ]

ಬೆಂಗಳೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 'ಕಿಸ್ ಆಫ್ ಲವ್' ವಿರೋಧಿಸುವವರು ಬರಬಹುದು. ಅವರಿಗೆ ವಾಹನ ಮತ್ತು ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. 'ಕಿಸ್ ಆಫ್ ಲವ್' ವಿರೋಧಿಸುವ ಹಲವಾರು ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಿವೆ ಎಂದು ಸ್ವಾಮೀಜಿ ತಿಳಿಸಿದರು. [ಕಿಸ್ ಆಫ್ ಲವ್ː ಬೆಂಗಳೂರು ವಿದ್ಯಾರ್ಥಿಗಳು ಏನಂತಾರೆ?]
'ಪ್ರತಿಭಟನೆ ಹೆಸರಿನಲ್ಲಿ ರಸ್ತೆಯಲ್ಲಿ ಮುತ್ತು ಕೊಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದ ಸ್ವಾಮೀಜಿಗಳು, 'ಕಿಸ್ ಆಫ್ ಲವ್'ನಲ್ಲಿ ಪಾಲ್ಗೊಳ್ಳುವವರು ಮಾನಸಿಕ ಅಸ್ವಸ್ಥರಿಗೆ, ಎಚ್‌ಐವಿ ಪೀಡಿತರಿಗೆ ಮುತ್ತು ಕೊಡಲಿ' ಎಂದು ಸ್ವಾಮೀಜಿ ಸವಾಲು ಹಾಕಿದರು.
ಒಂದು ದಿನದ ನಿರಶನ : 'ಕಿಸ್ ಆಫ್ ಲವ್'ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ನ.26ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ಘೋಷಿಸಿದರು.
ಶೆಟ್ಟರ್ ವಿರೋಧ : 'ಕಿಸ್ ಆಫ್ ಲವ್'ನಂತಹ ಆಚರಣೆಗೆ ಬಿಜೆಪಿಯಿಂದ ತೀವ್ರವಾದ ವಿರೋಧವಿದೆ. ಇಂತಹ ಕಾರ್ಯಕ್ರಮಗಳು ಎಲ್ಲಿಯೂ ನಡೆಯಬಾರದು. ಕಿಸ್ ಆಫ್ ಲವ್ ನಡೆಸದಂತೆ ರಾಜ್ಯ ಮುಖಂಡರ ಜೊತೆ ಚರ್ಚಿಸುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಂಗಳೂರಿನಲ್ಲಿ ಹೇಳಿದ್ದಾರೆ.












Click it and Unblock the Notifications