2 ಗಂಟೆಯಲ್ಲೇ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಹತ್ತಿದ ಕೋತಿರಾಜ್, ಮತ್ತೊಂದು ಸಾಧನೆ
ಜ್ಯೋತಿರಾಜ್ ಅವರು ಬೆಳ್ತಂಗಡಿಯಲ್ಲಿನ ಅತೀ ಎತ್ತರದ ಬೆಟ್ಟವೊಂದನ್ನು ಏರಿ ಮತ್ತೊಂದು ಸಾಧನೆ ಮಾಡಿದ್ದಾರೆ. ಹಾಗಾದರೆ "ಆ" ಬೆಟ್ಟದ ಒಟ್ಟು ಎತ್ತರ ಎಷ್ಟು, ವಿಶೇತೆ ಏನು ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಂಗಳೂರು, ಫೆಬ್ರವರಿ, 13: ಭಾರತದ ಮಂಕಿಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತೀ ಎತ್ತರದ ಬೆಟ್ಟವೊಂದನ್ನ ಹತ್ತಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಬೆಳ್ತಂಗಡಿಯ ಪ್ರಸಿದ್ಧ ಗಡಾಯಿ ಕಲ್ಲನ್ನು ಕೋತಿ ರಾಜು ಕೇವಲ ಎರಡು ಗಂಟೆಯಲ್ಲಿ ಏರಿ ಸಾಧನೆ ಮಾಡಿದ್ದಾರೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿ ಕಲ್ಲನ್ನು ಕೋತಿ ರಾಜು ರೋಪ್ ಸಹಾಯದಿಂದ ಕೈ ಮತ್ತು ಕಾಲಿನ ಶಕ್ತಿಯಿಂದ ಏರಿದ್ದಾರೆ. ಈ ಮೂಲಕ ಬರೀ ರೋಪ್‌ನಲ್ಲಿ ಗಡಾಯಿಕಲ್ಲು ಏರಿದ ಮೊದಲ ವ್ಯಕ್ತಿ ಕೋತಿ ರಾಜು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಬೆಟ್ಟದ ಮೇಲೆ ಕನ್ನಡ ಬಾವುಟ ಹಾರಿಸಿದ ಜ್ಯೋತಿ ರಾಜ್
ಗಡಾಯಿಕಲ್ಲು ಕೆಳಗಿರುವ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೋತಿ ರಾಜು, ದೇವಳದ ಅರ್ಚಕರು ಏರಿದ ತೆಂಗಿನ ಕಾಯಿಯನ್ನು ಒಡೆದು ತಮ್ಮ ಸಾಹಸವನ್ನು ಆರಂಭಿಸಿದ್ದರು. ಮೆಟಲ್ ರೋಪ್ ಬಳಸಿ ಗಡಾಯಿಕಲ್ಲು ಹತ್ತಲು ಆರಂಭಿಸಿದ ಕೋತಿರಾಜು ಸತತ ಎರಡು ಗಂಟೆಗಳ ಕಾಲ ಗುಡ್ಡ ಹತ್ತಿದ್ದು, ತುದಿ ತಲುಪಿದ ಬಳಿಕ ಕನ್ನಡ ಬಾವುಟ ಹಾರಿಸಿ ಗಡಾಯಿಕಲ್ಲು ಏರಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಳೆದರೆಡು ದಿನಗಳಿಂದ ಗಡಾಯಿ ಕಲ್ಲುಗೆ ತೆರಳಿದ ಕೋತಿರಾಜು ಮತ್ತು ತಂಡ ಸ್ಥಳ ಪರಿಶೀಲನೆ ನಡೆಸಿದ್ದರು. ಹಾಗೆಯೇ ಈ ಸಂದರ್ಭದಲ್ಲಿ ಗಡಾಯಿಕಲ್ಲು ಏರಲು ಸವಾಲುಗಳ ಬಗ್ಗೆ ತಿಳಿದುಕೊಂಡಿದ್ದರು. ಕೋತಿರಾಜುಗೆ ಎಂಟು ಮಂದಿ ಶಿಷ್ಯ ವರ್ಗದವರು ಸಹಾಯ ಮಾಡಿದ್ದಾರೆ.
ಬೆನ್ನುಮೂಳೆ ನೋವು ಮಾಡಿಕೊಂಡಿದ್ದ ಕೋತಿರಾಜ್
ಕಳೆದ ಎರಡು ವರ್ಷಗಳ ಹಿಂದೆ ಜೋಗದಲ್ಲಿ ಬಿದ್ದು ಬೆನ್ನುಮೂಳೆ ನೋವು ಮಾಡಿಕೊಂಡಿದ್ದ ಕೋತಿರಾಜು ಬಳಿಕ ಒಂದೂವರೆ ವರ್ಷ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಸುಮಾರು 130 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೆ ವ್ಯಾಯಾಮ ಮಾಡಿ ದೇಹದ ತೂಕ ತಗ್ಗಿಸಿ ಕೋತಿ ರಾಜು ತಮ್ಮ ಸಾಹಸ ಕಾರ್ಯವನ್ನು ಮುಂದುವರೆಸಿದ್ದಾರೆ. ಕ್ಲೈಮ್ಮಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ ಎಂದು ಕೋತಿರಾಜು ತನಗಿರುವ ಆಸೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜನರು ನೀಡುವ ಧನ ಸಹಾಯದಿಂದ ಫೌಂಡೇಶನ್ ಸ್ಥಾಪಿಸುತ್ತೇನೆ. ಆ ಫೌಂಡೇಶನ್ ಮೂಲಕ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡಿ ಒಲಿಂಪಿಕ್ಸ್‌ಗೆ ತಯಾರು ಮಾಡುತ್ತೇನೆ ಎಂದು ಕೋತಿರಾಜು ಹೇಳಿದ್ದಾರೆ. ಹಾಗೆಯೇ ಮುಂದಿನ ವಾರ ಮಂಗಳೂರಿನ ಅತೀ ಎತ್ತರದ ಕಟ್ಟಡ ಏರಲು ಪ್ಲಾನ್ ರೂಪಿಸಿರುವ ಕೋತಿ ರಾಜು, ಇದಕ್ಕಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರ ಸಹಕಾರ ಕೋರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications