ಬೆಳ್ತಂಗಡಿ: ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟು ವಿಕೃತಿ ಮೆರೆದ ಭೂಪ
ಮಂಗಳೂರು, ಜುಲೈ, 11: ದೈವದ ಜಾಗದ ವಿಚಾರದಲ್ಲಿ ತಗಾದೆ ನಡೆದು ವ್ಯಕ್ತಿಯೊಬ್ಬನು ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟು ವಿಕೃತಿ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರುವಿನಲ್ಲಿ ನಡೆದಿದೆ.
ಬಾಡಾರಿನ ಕೊರಗಕಲ್ಲು ಎಂಬಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ವಿಚಾರದಲ್ಲಿ ಗಲಾಟೆ ನಡೆದಿದೆ. ನಂತರ ಗಲಾಟೆಯು ತಾರಕಕ್ಕೇರಿ ಗುಡಿಯ ಬದಿಯಲ್ಲಿರುವ ನಿವಾಸಿ ಈ ರೀತಿಯ ವಿಕೃತಿ ಮೆರೆದಿದ್ದಾನೆ. ಇಲ್ಲಿನ ಸಾರ್ವಜನಿಕರು ಸ್ವಾಮಿ ಕೊರಗಜ್ಜ ಸಮಿತಿಯನ್ನು ರಚನೆ ಮಾಡಿ ವರ್ಷಂಪ್ರತಿ ಕೊರಗಜ್ಜನಿಗೆ ಕೋಲ, ಅಗೇಲು ನೀಡಿ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿಯಿರುವ ಸ್ಥಳದ ಬಗ್ಗೆ ಸ್ಥಳೀಯ ವ್ಯಕ್ತಿಯೋರ್ವನು ಅದು ತನ್ನ ಜಾಗವೆಂದು ಆಕ್ಷೇಪ ವ್ಯಕ್ತಪಡಿಸಿದ್ದನು.

ಕಳೆದ ಕೆಲವು ವರ್ಷಗಳಿಂದ ಸ್ವಾಮಿ ಕೊರಗಜ್ಜ ಸಮಿತಿ ಹಾಗೂ ಈ ವ್ಯಕ್ತಿಯ ನಡುವೆ ತಗಾದೆ ಏರ್ಪಟ್ಟಿತ್ತು. ಇದೀಗ ಆತ ಅಲ್ಲಿಯೇ ಮತ್ತೊಂದು ಕೊರಗಜ್ಜನ ಗುಡಿ ಕಟ್ಟಲು ವ್ಯವಸ್ಥೆ ಮಾಡಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಮಿತಿಯವರು ಪೊಲೀಸ್ ದೂರು ದಾಖಲಿಸಿದ್ದರು.
ಇದರಿಂದ ಆಕ್ರೋಶಿತನಾದ ಸ್ಥಳೀಯ ವ್ಯಕ್ತಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾನೆ. ಇನ್ನು ಈ ಕುರಿತು ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications