ಹಿಜಾಬ್ ವಿವಾದ: ಸರ್ಕಾರವನ್ನು ಬೆಂಬಲಿಸಿದ ಬ್ಯಾರಿ ಅಕಾಡೆಮಿ ಮುಖ್ಯಸ್ಥರಿಗೆ ಬೆದರಿಕೆ ಕರೆ
ಮಂಗಳೂರು, ಫೆಬ್ರವರಿ 06: ಕರ್ನಾಟಕ ರಾಜ್ಯದಲ್ಲಿ ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿ ಹಿಜಾಬ್ ವಿವಾದವು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಹಿಜಾಬ್ ವಿವಾದದಲ್ಲಿ ಸರ್ಕಾರವನ್ನು ಬೆಂಬಲಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ.
ನನಗೆ ತಿಳಿಯದ ಸಂಖ್ಯೆಯಿಂದ ತನಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ನಿಂದಿಸಿದ್ದಲ್ಲದೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ರಹೀಮ್ ಉಚ್ಚಿಲ್ ಹೇಳಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಲ್ಲಿ ನನ್ನನ್ನು ನಿಂದನೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಬಿಜೆಪಿ ನಾಯಕ ರಹೀಮ್ ಉಚ್ಚಿಲ್, "ನಾನು ನನಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಈಗಾಗಲೇ ಮಂಗಳೂರು ದಕ್ಷಿಣ ಪೊಲೀಸರಿಗೆ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಬೆದರಿಕೆ ಕರೆಗಳಿಂದ ನಾನು ಹೆದರುವುದಿಲ್ಲ," ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದ ರಹೀಮ್ ಉಚ್ಚಿಲ್
ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಹಿಜಾಬ್ ವಿಚಾರವು ಈಗ ರಾಜಕೀಯ ಬಣ್ಣ ಪಡೆದಿದೆ. ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಹೀಮ್ ಉಚ್ಚಿಲ್ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದರು. ಇದೇ ಕಾರಣದಕ್ಕೆ ಬೆದರಿಕೆ ಕರೆ ಬಂದಿದೆ ಎಂದು ವರದಿ ಉಲ್ಲೇಖ ಮಾಡಿದೆ.
ವಿದ್ಯಾರ್ಥಿಗಳ ನಡುವೆ ಕೋಮು ದ್ವೇಷ ಭಿತ್ತಿದ ಹಿಜಾಬ್ ವಿವಾದ
ಉಡುಪಿಯ ಹಿಜಾಬ್ ವಿವಾದ ಸದ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಹೈಕೋರ್ಟ್‌ಗೆ ಕೂಡಾ ಈ ಹಿಜಾಬ್ ವಿವಾದ ತಲುಪಿದೆ. ಫೆಬ್ರವರಿ 8ರ ಮಂಗಳವಾರ ಹೈಕೋರ್ಟ್‌ನಲ್ಲಿ ಹಿಜಾಬ್ ಕುರಿತು ಹಾಕಲಾಗಿದ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್‌ನಲ್ಲಿ ಪ್ರಬಲವಾದ ಮಂಡಿಸಲು ತಯಾರಾಗಿರುವ ಉಡುಪಿ ಕಾಲೇಜು ಅಭಿವೃದ್ಧಿ ಸಮಿತಿ ಶಾಸಕ ರಘಪತಿ ಭಟ್ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
"ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆಗಳು ಇದೆ. 2002ರಿಂದ ಎಲ್ಲಾ ಲಿಖಿತ ದಾಖಲೆಗಳು ಇವೆ. 2008ರಲ್ಲಿ ತರಗತಿ ಪ್ರಕಾರ ವಿದ್ಯಾರ್ಥಿನಿಯರ ಫೋಟೋ ತೆಗೆದಿದ್ದೇವೆ. ಅದರಲ್ಲಿ ಯಾರೂ ಹಿಜಾಬ್ ಧರಿಸಿಲ್ಲ. ಕಾಲೇಜು ಅಸೆಂಬ್ಲಿ ಆದಾಗ ತೆಗೆದ ಫೋಟೋ ಇದೆ. ಅದರಲ್ಲಿ ಯಾರೂ ಹಿಜಾಬ್ ಧರಿಸಿಲ್ಲ. ನವೆಂಬರ್ ಕನ್ನಡ ರಾಜ್ಯೋತ್ಸವದ ವಿದ್ಯಾರ್ಥಿನಿಯರ ಗುಂಪಿನ ಫೋಟೋದಲ್ಲೂ ಹಿಜಾಬ್ ಇಲ್ಲ. ಕೋರ್ಟ್‌ಗೆ ಹೋದ ಒಬ್ಬಳು ವಿದ್ಯಾರ್ಥಿನಿ, ವಿದ್ಯಾರ್ಥಿ ಸಂಘದ ನಾಯಕಿಯಾಗಿದ್ದಾಳೆ. ಆಕೆ ಪ್ರಮಾಣ ವಚನ ಸ್ವೀಕರಿಸಿದ ಫೋಟೋ ಇದೆ. ಅದರಲ್ಲೂ ಆಕೆ ಹಿಜಾಬ್ ಅನ್ನು ಧರಿಸಿಲ್ಲ" ಎಂದು ಶಾಸಕರು ಹೇಳಿದ್ದಾರೆ.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಹ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದು ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ತಿಳಿಸಿದೆ. ಒಂದು ವೇಳೆ ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದೆ ಇದ್ದರೆ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಿರುವ ಉಡುಪು ಧರಿಸಬೇಕು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications