ಕೇರಳದ ಈ ಊರಲ್ಲಿ ಬಾವಲಿ ಹಿಡಿಯುವುದೇ ಒಂದು ಹಬ್ಬ
ಮಂಗಳೂರು, ಮೇ 26 : ಕೇರಳದಲ್ಲಿ ಭಾರೀ ಆತಂಕ ಸೃಷ್ಟಿಸಿರುವ ನಿಪಾಹ್ ವೈರಸ್ ಸೋಂಕು ಬಾವಲಿಗಳಿಂದ ಹರಡುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜನರು ಬಾವಲಿಗೆ ಹೆದರಿ ದೂರ ಓಡುತ್ತಿದ್ದಾರೆ. ಮರದಿಂದ ಬಿದ್ದ ಹಣ್ಣುಗಳನ್ನು ತಿನ್ನಲು ಸಹ ಜನರು ಹೆದರುತ್ತಿದ್ದಾರೆ.
ಬಿದ್ದ ಹಣ್ಣುಗಳು ಬಾವಲಿ ತಿಂದಂತಹ ಹಣ್ಣುಗಳೆಂದು, ಅವುಗಳನ್ನು ಮುಟ್ಟಲು ಸಹ ಹೆದರುತ್ತಿದ್ದಾರೆ. ಕೇರಳ ಹಾಗೂ ಕರ್ನಾಟಕದಲ್ಲಿ ಈ ಬಾವಲಿ ಆತಂಕ ಸೃಷ್ಟಿಸಿದೆ. ಆದರೆ ಕೇರಳದಲ್ಲೇ ಬಾವಲಿಗಳನ್ನು ಹಿಡಿಯುವ ಹಬ್ಬ ಒಂದು ನಡೆಯುತ್ತದೆ ಎಂಬರೆ ನಂಬುತ್ತೀರಾ? ಹೌದು, ಕೇರಳದ ಕಾಸರಗೋಡು ಜಿಲ್ಲೆಯ ಅಡೂರಿನ ಪಾಂಡಿ ಎಂಬಲ್ಲಿ ಬಾವಲಿ ಹಿಡಿಯುವ ಹಬ್ಬ ನಡೆಯುತ್ತದೆ.
ಇದನ್ನು ಕೇಳಿದೊಡನೆ ಆಶ್ಚರ್ಯವಾಗುವುದು ಸಹಜವೇ. ಈ ಬಾವಲಿ ಹಿಡಿಯುವ ಹಬ್ಬವನ್ನು ಆಚರಿಸುವ ಹಿಂದೆ ಒಂದು ಕಥೆ ಕೂಡ ಇದೆ. ಅಡೂರಿನ ಪಾಂಡಿ ಗ್ರಾಮಸ್ಥರು ತಮ್ಮ ಊರಿನ ಸುಖ- ಶಾಂತಿ ಹಾಗೂ ಐಶ್ವರ್ಯ ವೃದ್ಧಿಗಾಗಿ ಈ ಬಾವಲಿಯನ್ನು ಹಿಡಿಯುವ ಹಬ್ಬವನ್ನು ಆಚರಿಸುತ್ತಾರೆ. ಈ ಗ್ರಾಮದ ಮುಗೇರ ಹಾಗೂ ಸಲ್ಕಾ ಸಮುದಾಯದ ಜನರಿಗಷ್ಟೇ ಈ ಬಾವಲಿ ಹಿಡಿಯಲು ಅವಕಾಶ.

ವಿಶು ಹಾಗೂ ಶಿವರಾತ್ರಿಯ ಸಂದರ್ಭದಲ್ಲಿ ಈ ಹಬ್ಬ
ಈ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ವಿಶು ಹಾಗೂ ಶಿವರಾತ್ರಿಯ ಸಂದರ್ಭದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅನೇಕ ತಲೆಮಾರುಗಳಿಂದ ಈ ಆಚರಣೆ ನಡೆಯುತ್ತಾ ಬಂದಿದೆ . ಈ ಬಾವಲಿ ಹಿಡಿಯುವ ಹಬ್ಬದ ಸಂದರ್ಭದಲ್ಲಿ ಸುಮಾರು 50 ಜನರು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿರುವ ಮೂರು ಗುಹೆಯೊಳಗೆ ನುಗ್ಗಿ, ಅಲ್ಲಿರುವ ಬಾವಲಿಗಳನ್ನು ಹೊಡೆದು ಹಿಡಿಯುತ್ತಾರೆ.

ಪ್ರತ್ಯೇಕ ಮುಳ್ಳಿನ ಗಿಡವನ್ನು ಬಳಸುತ್ತಾರೆ
ಈ ಗ್ರಾಮಸ್ಥರು ಬಾವಲಿಗಳನ್ನು ಹಿಡಿಯುವುದಕ್ಕಾಗಿಯೇ ಪ್ರತ್ಯೇಕ ಮುಳ್ಳಿನ ಗಿಡವನ್ನು ಬಳಸಲಾಗುತ್ತದೆ. ಸಿಕ್ಕಿದ ಬಾವಲಿಯನ್ನು ತಾವು ಧರಿಸಿರುವ ಲುಂಗಿಯಲ್ಲಿ ಕಟ್ಟಿ ತರುತ್ತಾರೆ. ಬೇಟೆಯಲ್ಲಿ ಸಿಕ್ಕಿದ ಬಾವಲಿಯನ್ನು ರಾಶಿ ಹಾಕಿ, ಅವುಗಳಲ್ಲಿ ಸ್ವಲ್ಪ ಬಾವಲಿಯನ್ನು ಪದಾರ್ಥ ಮಾಡಿ, ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಉಳಿದ ಬಾವಲಿಗಳನ್ನು ಬೇಟೆಯಾಡಿ ತಂದವರು ಕೊಂಡೊಯ್ಯುತ್ತಾರೆ.

ಬಾವಲಿಯ ರೆಕ್ಕೆಗಳಿಂದ ಡೋಲು ತಯಾರಿ
ಈ ಬಾವಲಿಯ ರೆಕ್ಕೆಗಳಿಂದ ಡೋಲುಗಳನ್ನು ತಯಾರಿಸಲಾಗುತ್ತದೆ. ಒಂದು ವೇಳೆ ಬಾವಲಿ ಸಿಕ್ಕಿಲ್ಲ ಎಂದಾದಲ್ಲಿ ದೇವಿ ಮುನಿಸಿಕೊಳ್ಳುತ್ತಾಳೆ ಎನ್ನುವುದು ಜನರ ನಂಬಿಕೆ. ಹಾಗಾಗಿ ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಬಾವಲಿಗಳನ್ನು ಹಿಡಿದು ತರುತ್ತಾರೆ.

ದೇವಿಗೆ ಕಾಣಿಕೆ, ಕೋಳಿ ಅರ್ಪಣೆ
ಬಾವಲಿಯನ್ನು ಹಿಡಿಯಲು ತೆರಳುವ ಮುನ್ನ, ಬಾವಲಿ ಹಿಡಿಯುವವರು ಸ್ನಾನ ಮಾಡಿ ಶುದ್ಧವಾಗಿ ದೇವಿಗೆ ಕಾಣಿಕೆ ಹಾಗೂ ಕೋಳಿಯನ್ನು ಅರ್ಪಿಸಿ, ಆ ನಂತರ ಬಾವಲಿ ಹಿಡಿಯಲು ಹೋಗುವುದು ಸಂಪ್ರದಾಯ. ಅದರಂತೆಯೇ ಇಲ್ಲಿನ ಜನರು ಅನಾದಿ ಕಾಲದಿಂದ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ.












Click it and Unblock the Notifications