ಬನ್ನಂಜೆ ರಾಜಾ ಸಂದರ್ಶನ : 4 ಟಿವಿ ವಾಹಿನಿಗೆ ನೋಟೀಸ್
ಉಡುಪಿ, ಡಿಸೆಂಬರ್ 01 : ಇತ್ತೀಚೆಗೆ ಮೋರೊಕ್ಕೋದಲ್ಲಿ ಬಂಧಿಸಿ ಭಾರತಕ್ಕೆ ಕರೆತಂದ ಭೂಗತಲೋಕದ ಡಾನ್ ಬನ್ನಂಜೆ ರಾಜಾನ ಸಂದರ್ಶನ ಪ್ರಸಾರ ಮಾಡಿದ 4 ಖಾಸಗಿ ಟಿವಿ ವಾಹಿನಿ ವರದಿಗಾರರು ಮತ್ತು ಕಾರ್ಯಕ್ರಮ ನಿರ್ವಾಹಕರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ನೋಟೀಸ್ ಪಡೆದುಕೊಂಡ ಎಲ್ಲರೂ ಮಂಗಳವಾರ ಉಡುಪಿ ಎಸ್ಪಿ ಅಣ್ಣಾಮಲೈ ಎದುರು ಹಾಜರಾಗಿ ಸಂದರ್ಶನದ ಸಂಪೂರ್ಣ ವಿವರ ನೀಡಬೇಕಾಗಿದೆ. ದೂರವಾಣಿ ಸಂದರ್ಶನದ ಮೂಲ ಧ್ವನಿಸುರಳಿಯನ್ನು ನೀಡಲು ಇಲಾಖೆ ಕೇಳಿದೆ. ಸಂದರ್ಶನ ಮಾಡಿದವರಿಗೆ ಕೋಕಾ ಕಾಯ್ದೆ ಸೆಕ್ಷನ್ 2ರ ಪ್ರಕಾರ ಆರೋಪಿಗಳೆಂದು ಈಗಾಗಲೇ ಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ರಾಜ್ಯದಲ್ಲೇ ಮೊದಲು : ಭೂಗತ ಲೋಕದವರ ಸಂದರ್ಶನ ಮಾಡಿದ ಮಾಧ್ಯಮದವರಿಗೆ ನೋಟೀಸ್ ನೀಡಿದ್ದು ಮತ್ತು ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದು ದೇಶದಲ್ಲಿ ಇದೇ ಮೊದಲು. ಆಯಾ ವಾಹನಿಯ ರಿಪೋರ್ಟರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. [ಭೂಗತ ಪಾತಕಿ ಬನ್ನಂಜೆ ರಾಜನಿಗೆ ಹಿಂಡಲಗಾ ಜೈಲೇ ಗತಿ]

ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಸಂದರ್ಶನದಲ್ಲಿ ಬನ್ನಂಜೆ ರಾಜಾ, ನಾನು ಏನೂ ಬೇಕಾದರೂ ಮಾಡಬಲ್ಲೆ, ನನ್ನ ಹತ್ತಿರ ಹುಡುಗ್ರು ಇದಾರೆ, ಇನ್ನಷ್ಟು ಜನರನ್ನು ಸಾಯಿಸ್ತೇನೆ, ಅಂಕೋಲಾದ ಗಣಿ ಉದ್ಯಮಿ ಆರ್.ಎನ್.ನಾಯ್ಕ ಹತ್ಯೆಯನ್ನು ನಾನೇ ಮಾಡಿಸಿದ್ದು ಎಂದು ಹೇಳಿದ್ದಾನೆ. ಇದರಿಂದ ಪರೋಕ್ಷವಾಗಿ ಬೇರೆಯವರಿಗೂ ಕೊಲೆ ಬೆದರಿಕೆಯನ್ನು ಮಾಧ್ಯಮಗಳ ಮೂಲಕ ಮಾಡಿದ್ದಾನೆ ಎಂದು ಹೇಳುತ್ತಾರೆ.
ಸಂದರ್ಶನ ಮಾಡುವವರು ಕೂಡ, ಈಗ ಮತ್ತೆ ಮುಂದೆ ಯಾರನ್ನು ಕೊಲೆ ಮಾಡಿಸುತ್ತೀರಿ ಎಂದು ಕೇಳುತ್ತಾರೆ. ಆಗ ರಾಜಾ ಈಗಾಗಲೇ ಅವರಿಗೆ ಹೇಳಿದ್ದೇನೆ. ನನ್ನ ಟಿವಿ ಸಂದರ್ಶನವನ್ನು ಎಲ್ಲರಿಗೂ ನೋಡಲು ಹೇಳುತ್ತೇನೆ. ಆವಾಗ ತಾವಾಗಿಯೇ ಹೇಳಿದಂಗೆ ಕೇಳುತ್ತಾರೆ ಎಂದು ಹೇಳಿದ್ದಾನೆ. ಜೊತೆಗೆ ದುಡ್ಡು ಕೇಳಿದವರ ಬಳಿ ನನ್ನ ಟಿವಿ ಸಂದರ್ಶನ ನೋಡಿ ಸರಿಯಾಗಿ ತಿಳಿದುಕೊಳ್ಳಿ ನನ್ನ ಬಗ್ಗೆ ಎಂದು ಕೂಡ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ರಾಜಾನ ಅಪರಾಧ ಕೃತ್ಯಗಳಿಗೆ ಟಿವಿ ಮಾಧ್ಯಮದವರು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ದೂರಿರುವ ಪೊಲೀಸ್ ಇಲಾಖೆ ಆರೋಪಿಗಳ ಪಟ್ಟಿಯಲ್ಲಿ ಮಾಧ್ಯಮದವರನ್ನೂ ಸೇರಿಸಿದ್ದಾರೆ. ಆರೋಪ ಸಾಬೀತಾದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ.












Click it and Unblock the Notifications