ಮಂಗಳೂರಿನಲ್ಲಿ ಹೋಳಿ ಆಚರಣೆಗೆ ತೆರಳುವ ಮುನ್ನ ಈ ಮುನ್ನೆಚ್ಚರಿಕೆ ಓದಿ
ಮಂಗಳೂರು, ಮಾರ್ಚ್ 13: ನಮ್ಮ ದೇಶದಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮ, ವಿಶಿಷ್ಟ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ರಂಗು ರಂಗಿನ ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದು ಮೊದಲಿನಿಂದಲೂ ಬಂದ ಆಚರಣೆ. ಆದರೆ ಇತ್ತೀಚಿಗೆ ಹಬ್ಬಗಳು ಆಧುನೀಕರಣವಾಗಿದ್ದು, ಹಬ್ಬದ ಆಚರಣೆಗಳು ವ್ಯವಹಾರವಾಗಿದೆ.
ದಕ್ಷಿಣ ಕನ್ನಡದಲ್ಲಿ ಹೋಳಿ ಹಬ್ಬ ಆಚರಣೆಗಳಿಗೆ ಕೆಲವು ತಂಡಗಳು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆ ಮಾತ್ರವಲ್ಲದೇ ಅಂತರ್ ಜಿಲ್ಲೆಯ ಜನರು ಮಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಹೋಳಿ ಹಬ್ಬ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಅಂತಹ ಕಾರ್ಯಕ್ರಮದಲ್ಲಿ ಕಾನೂನು ಉಲ್ಲಂಘನೆ ಮಾಡದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಹೋಳಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಿದರೆ ಪರಿಣಾಮ ನೆಟ್ಟಗಿರದು ಎಂದು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿರುವ ಪುನೀತ್ ಅತ್ತಾವರ, 'ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆಯಾಗಿದ್ದು ಅದಕ್ಕೆ ಅದರದ್ದೇ ಆದ ಧಾರ್ಮಿಕ ಹಿನ್ನೆಲೆಯಿದೆ.
ಮಹಾದೇವನ ಕ್ರೋದಾಗ್ನಿಗೆ ದಹಿಸಿ ಹೋದ ಮನ್ಮಥನು ಮತ್ತೆ ರತಿಯ ಮುಂದೆ ಶರೀರ ರೂಪದಲ್ಲಿ ಕಾಣುವ ದಿನವನ್ನು ಹೋಳಿ ಹಬ್ಬದ ಎಂದು ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಗಾಂಜಾ, ಡ್ರಗ್ಸ್, ಅಫೀಮು ಮಾರಾಟಗಾರರು ನಶೆ ಹಂಚುವ ಮೂಲಕ ನಗರದಲ್ಲಿ ರಾಜಾರೋಷವಾಗಿ ಮಾದಕವಸ್ತು ಮಾರಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಕರಾವಳಿ ಭಾಗದಲ್ಲಿ ಆಳವಾಗಿ ಬೇರೂರುತ್ತಿರುವ ಮಾದಕವಸ್ತು ಮಾರಾಟ ಜಾಲ ತಮ್ಮ ವ್ಯವಹಾರ ವಿಸ್ತರಿಸುವ ದೃಷ್ಟಿಯಿಂದ ಕಾಲೇಜು ವಿಧ್ಯಾರ್ಥಿ - ವಿಧ್ಯಾರ್ಥಿನಿಯರನ್ನು ವಿವಿಧ ರೀತಿಯಲ್ಲಿ ಸೆಳೆಯುವ ಕೆಲಸ ಮಾಡುತ್ತಿವೆ. ಈಗಾಗಲೇ ಮಾದಕ ವ್ಯಸನಕ್ಕೆ ಬಲಿಯಾದ ಅನೇಕ ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಹಿಂಸೆಯನ್ನು ಅನುಭವಿಸುತ್ತಿರುವ ಕುರಿತು ಮಾಹಿತಿಗಳು ನಮ್ಮ ಮುಂದಿದೆ.
ಈಗಾಗಲೇ ನಗರದಲ್ಲಿ ನಡೆಸಲು ಉದ್ಧೇಶಿಸಿರುವ ರಂಗ್ ದ ಬರ್ಸ, ಹೋಳಿ ಮುಂತಾದ ಹೆಸರುಗಳಿಂದ ಹಿಂದೂ ಹೆಣ್ಣುಮಕ್ಕಳನ್ನು ಡ್ರಗ್ಸ್, ಗಾಂಜಾ, ಅಫೀಮ್ ಮುಂತಾದ ಮಾದಕದ್ರವ್ಯ ವ್ಯಸನಿಗಳನ್ನಾಗಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಆ ಮೂಲಕ ಯುವ ಸಮುದಾಯವನ್ನು ತಪ್ಪು ಹಾದಿಗೆಳೆಯುವ ಚಟುವಟಿಕೆಗಳು ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡದಂತೆ ಈಗಾಗಲೇ ಬಜರಂಗದಳ ಮನವಿ ಸಲ್ಲಿಸಿದ್ದು, ಅದನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದರೆ ಇದರ ನೇರ ಪರಿಣಾಮವನ್ನು ಸಂಘಟಕರೇ ಅನುಭವಿಸಬೇಕಾಗುತ್ತದೆ.
ಕಳೆದ ಬಾರಿ ಮರೋಳಿಯಲ್ಲಿ ಹೋಳಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಏನಾಗಿತ್ತು ಎನ್ನುವುದನ್ನು ಮನವರಿಕೆ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ನಡೆಸಲು ನಿರ್ಬಂಧ ಹೇರಬೇಕು. ಇಲ್ಲದೆ ಹೋದರೆ ಇದನ್ನು ನೇರವಾಗಿ ಎದುರಿಸಲು ಬಜರಂಗದಳ ಸಿದ್ಧವಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications