ಲೇಖನ ಸಮಾಜವನ್ನು ಕೆರಳಿಸದಿರಲಿ- ನಾಗತಿಹಳ್ಳಿ
ಮಂಗಳೂರು, ಮೇ. 27: ಲೇಖಕ ತಾನು ಬರೆದ ಮಾತನ್ನು ಸಮರ್ಥಿಸುತ್ತಾ ಇದ್ದರೆ ಆತ ವಕಾಲತನ್ನೇ ಮಾಡಬೇಕಾಗುತ್ತದೆ. ಲೇಖಕ ಬದುಕುತ್ತಿರುವ ಸಮಾಜದ ಒಳಗಿನ ತಪ್ಪುಒಪ್ಪನ್ನು ಬರೆಯಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಹೇಳಿದರು.
ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್, ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಸಂಘ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಸಂಸ್ಕೃತಿ ಉತ್ಸವ ಮತ್ತು ಡಾ.ಡಿ.ಕೆ. ಚೌಟ75ರ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ಕೆರಳಿಸುವುದಕ್ಕಾಗಿ ಲೇಖಕ ಬರೆಯಬಾರದು. ಸ್ಥಿತಿಯನ್ನು ಹೇಳುವುದಷ್ಟೇ ಲೇಖಕನ ಪಾತ್ರ. ಡಾ.ಡಿ.ಕೆ.ಚೌಟ ಅವರು ಹಳ್ಳಿಯ ಮುಖಂಡನ ಸ್ವಗತದಂತೆ ಕಾಣಿಸುತ್ತಿದ್ದು, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕ್ಷೇತ್ರದಲ್ಲಿ ಅವರ ಸಾಧನೆ ಶ್ಲಾಘನೀಯ ಎಂದು ಹೇಳಿದರು.

ಇಂದು ನೆನಪಿನ ಕೋಶ ನಾಶವಾಗುತ್ತಿದೆ. ವಿದೇಶದಿಂದ ಹಣ ತಂದು ಸಾಲು ಸಾಲು ದೇವಾಲಯಗಳನ್ನು ಕಟ್ಟುವುದಕ್ಕಿಂತ ಅರಿವಿನ ಪ್ರಸಾರವಾಗುವ ಗ್ರಂಥಾಲಯಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.
ಕೃಷಿ ಸಂಸ್ಕೃತಿ ಹೃದಯದಿಂದಲೇ ಬರಲಿ: ಕೃಷಿ ಸಂಸ್ಕೃತಿ ನಮ್ಮ ಹೃದಯದಿಂದಲೇ ಬರಬೇಕಿದೆ. ಇಂದು ಕೃಷಿಯ ಅಧಃಪಥನ ಆಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಅಮೆರಿಕದ ಮುಂದೆ ಇಲ್ಲಿನ ಯುವಜನತೆ ಮಂಡಿಯೂರಿ ಅನ್ನ ಕೊಡಿ ಎಂದು ಕೇಳುವ ಪರಿಸ್ಥಿತಿ ಬರಬಹುದು ಎಂದು ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ ಅವರು ನಡೆಸಿದ ಸಂವಾದದಲ್ಲಿ ಚೌಟ ಅವರು ಹೇಳಿದರು.
ಲಂಗು ಲಗಾಮಿಲ್ಲದೆ ಭೂಮಿಯ ಪರಿವರ್ತನೆ ಆಗುತ್ತಿದೆ. ಇದಕ್ಕೆ ಸರ್ಕಾರದ ಕೃಪಾಕಟಾಕ್ಷವೂ ಇದೆ. ಐಟಿ ಕ್ಷೇತ್ರದವರೂ ಹಳ್ಳಿಗಳಲ್ಲಿ ಬಂದು ನೆಲೆಸಬೇಕು ಎಂದರು.
ಕಾರ್ಯಕ್ರಮದ ಬಳಿಕ 'ಪಚ್ಚೆ ತೆನೆ' ಸಾಕ್ಷ್ಯಚಿತ್ರ ಮತ್ತು 'ಪಿಲಿಪತ್ತಿ ಗಡಸ್' ನಾಟಕ ಪ್ರದರ್ಶನ ನಡೆಯಿತು. ನಂಜುಂಡಸ್ವಾಮಿ ತೊಟ್ಟವಾಡಿ, ಡಾ.ಆರ್.ನಾಗಪ್ಪ ಗೌಡ, ಡಾ.ಬಿ.ಎ.ವಿವೇಕ ರೈ, ಸತ್ಯನಾರಾಯಣ ಮಲ್ಲಿಪಟ್ಣ ಮತ್ತಿತರರು ಉಸ್ಥಿತರಿದ್ದರು.











Click it and Unblock the Notifications