ಕುಂಟುತ್ತಾ, ತೆವಳುತ್ತಾ ಸಾಗಿದ ಮಂಗಳೂರು ಪಂಪ್ವೆಲ್ ಫ್ಲೈಓವರ್ ಕೊನೆಗೂ ಸಂಚಾರಕ್ಕೆ ಮುಕ್ತ
ಮಂಗಳೂರು, ಜ 29: ಕರಾವಳಿ ಭಾಗದಲ್ಲಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇನ್ನಿಲ್ಲದಂತೇ ಟ್ರೋಲ್ ಆಗಲು ಕಾರಣವಾಗಿದ್ದ ನಗರದ ಪಂಪ್ವೆಲ್ ಮೇಲ್ಸೇತುವೆ ಕೊನೆಗೂ ಸಂಚಾರಕ್ಕೆ ಮುಕ್ತವಾಗಲಿದೆ.
ಬುಧವಾರ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳ ಜೊತೆ ಕಾಮಗಾರಿಯನ್ನು ವೀಕ್ಷಿಸಿದ, ಈ ಭಾಗದ ಸಂಸದರೂ ಆಗಿರುವ ನಳಿನ್ ಕಟೀಲ್, ಉದ್ಘಾಟನೆಯ ದಿನಾಂಕವನ್ನು ಪ್ರಕಟಿಸಿದರು.
ಇದೇ ಶುಕ್ರವಾರ, ಜನವರಿ 31ರಂದು ಬೆಳಗ್ಗೆ ಈ ಫ್ಲೈ ಓವರ್ ಉದ್ಘಾಟನೆಗೊಳ್ಳಲಿದ್ದು, ಅಂದೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಸಂಸದ ಕಟೀಲ್ ಹೇಳಿದರು.

ಹತ್ತು ವರ್ಷಗಳ ಹಿಂದೆ ಈ ಫ್ಲೈ ಓವರ್ ಕಾಮಗಾರಿಯ ಗುತ್ತಿಗೆಯನ್ನು ನವಯುಗ ಕಂಪೆನಿ ಪಡೆದುಕೊಂಡಿತ್ತು. ಮೂರು ವರ್ಷದೊಳಗೆ, ಅಂದರೆ 2013ರಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ, ಟೆಂಡರ್ ಪಡೆದುಕೊಂಡಿತ್ತು.
600 ಮೀಟರ್ ಉದ್ದದ ಈ ಫ್ಲೈಓವರ್ ಕಾಮಗಾರಿ ಮುಗಿಸಲು, ನವಯುಗ ಸಂಸ್ಥೆ, ಹಲವು ಗಡುವುಗಳನ್ನು ಪಡೆದುಕೊಂಡಿತ್ತು. ಆದರೂ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾಮಾಜಿಕ ತಾಣಗಳಲ್ಲಿ ಫ್ಲೈಓವರ್ ಕಾಮಗಾರಿ ಮತ್ತು ಸಂಸದ ಕಟೀಲ್, ಭಾರೀ ಟ್ರೋಲ್ ಗೆ ಒಳಗಾಗಿದ್ದರು.
ಹತ್ತು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗಿದ್ದ ಪಂಪ್ವೆಲ್ ಫ್ಲೈಓವರ್ ಕಾಮಗಾರಿ 2019ರ ಡಿಸೆಂಬರ್ ವೇಳೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ಸಂಸದ ನಳಿನ್ ಕಟೀಲ್ ಈ ಹಿಂದೆ ಭರವಸೆ ನೀಡಿದ್ದರು.












Click it and Unblock the Notifications