2ದಿನದ ಹಿಂದೆ ಮಗನ ಸಾವು: ಸುಮ್ಮನೆ ರಸ್ತೆಗೆ ಬರಬೇಡಿ, ಕಣ್ಣೀರು ಹಾಕಿ ಯುವಕರಿಗೆ ಎಎಸ್ಐ ಮನವಿ
ಮಂಗಳೂರು, ಮೇ 22: ರೋಗ ನಿರೋಧಕ ಶಕ್ತಿ ತಮ್ಮಲ್ಲಿ ಹೆಚ್ಚು ಇರುತ್ತದೆ ಎನ್ನುವ ವಿಶ್ವಾಸದಿಂದ ಯುವಕರು ಕಾರಣವಿಲ್ಲದೇ ಮನೆಯಿಂದ ಹೊರಗೆ ಬರಬಾರದು ಎಂದು ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
ಮಂಗಳೂರು ಪೂರ್ವ ಟ್ರಾಫಿಕ್ ಪೊಲೀಸ್ ಆಗಿರುವ ಎಎಸ್ಐ ದೊಂಬಯ್ಯ ದೇವಾಡಿಗ, ಕಾರಣವಿಲ್ಲದೇ ಮನೆಯಿಂದ ಹೊರಗೆ ಬರುವ ಯುವಕರಿಗೆ ತನ್ನ ಕುಟುಂಬದಲ್ಲಿ ನಡೆದ ದುರ್ಘಟನೆಯನ್ನು ವಿವರಿಸಿ ಹೊರಗೆ ಬರದಂತೆ ಮನವಿ ಮಾಡುತ್ತಿದ್ದಾರೆ.
"ಕೆಲವೇ ದಿನಗಳ ಹಿಂದೆ ನನ್ನ ಅಣ್ಣನ ಮಗ ಕೊರೊನಾಗೆ ಬಲಿಯಾದ. ಆತನಿಗೆ 32 ವರ್ಷ, ಇಂಜಿನಿಯರ್ ವೃತ್ತಿಯಲ್ಲಿರುವ ಅವನು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಎರಡು ತಿಂಗಳ ಹಿಂದೆಯಷ್ಟೇ ಆತನಿಗೆ ಮದುವೆಯಾಗಿತ್ತು" ಎಂದು ದೇವಾಡಿಗ ತಮ್ಮ ಕುಟುಂಬದ ದುಃಖವನ್ನು ವಿವರಿಸಿ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡುತ್ತಿದ್ದಾರೆ.

"ತಾನು ಯುವಕ ನನಗೇನೂ ಆಗುವುದಿಲ್ಲ, ರೋಗ ನಿರೋಧಕ ಶಕ್ತಿ ನನ್ನಲ್ಲಿ ಹೆಚ್ಚಿದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಅವನನ್ನು ಬಲಿ ಪಡೆದುಕೊಂಡಿತು. ಹಾಗಾಗಿ, ನೀವ್ಯಾರೂ ಸುಮ್ಮನೆ ಹೊರಗ ಬರಬೇಡಿ"ಎಂದು ಎಎಸ್ಐ ದೇವಾಡಿಗ, ಚೆಕ್ ಪೋಸ್ಟ್ ನಲ್ಲಿ ವಾಹನ ಸವಾರರಿಗೆ ಕಂಬನಿ ಸುರಿಸುತ್ತಾ ವಿನಂತಿಸಿಕೊಳ್ಳುತ್ತಿದ್ದಾರೆ.
ಇವರ ಅಣ್ಣನ ಮಗ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಕೋವಿಡ್ ದೃಢಪಟ್ಟ ನಂತರ, ಉಸಿರಾಟದ ತೊಂದರೆ ಎದುರಾಯಿತು. ಇವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿಸಿತ್ತು. ಎರಡು ದಿನಗಳ ಕೆಳಗಷ್ಟೇ ಇವರು ಮೃತ ಪಟ್ಟಿದ್ದರು.
ಎಎಸ್ಐ ದೊಂಬಯ್ಯ ದೇವಾಡಿಗ ಅವರ ಸೇವಾ ಅವಧಿ ಮುಗಿಯಲು ಇನ್ನೇನು ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಕುಟುಂಬದ ಸಾವಿನಿಂದ ಕಂಗೆಟ್ಟಿದ್ದರೂ ದೇವಾಡಿಗ, ಕೆಲಸಕ್ಕೆ ಹಾಜರಾಗಿ ಯುವ ಸವಾರರಲ್ಲಿ ತಮ್ಮದೇ ಕುಟುಂಬದ ನೋವಿನ ಕಥೆಯನ್ನು ಹೇಳಿ ವಿನಂತಿಸಿಕೊಳ್ಳುತ್ತಿದ್ದಾರೆ.












Click it and Unblock the Notifications