ಪುತ್ತೂರಿನಲ್ಲಿ "ಪುತ್ತಿಲ ಪರಿವಾರ" ಎಂಬ ಹೊಸ ಸಂಘಟನೆಯ ಲೋಕಾರ್ಪಣೆ
ಮಂಗಳೂರು, ಮೇ, 22: ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾನುವಾರ ಮತ್ತೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತ್ತು ಚುನಾವಣೆಯ ಬಳಿಕ ವಿದ್ಯಮಾನಗಳನ್ನು ಪುತ್ತೂರು ಮಹಾಲಿಂಗೇಶ್ವರ ದೇವರ ಮುಂದೆ ಅರ್ಪಿಸುವ ಸಲುವಾಗಿ, ಅರುಣ್ ಕುಮಾರ್ ಪುತ್ತಿಲ ಆಯೋಜಿಸಿದ ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಕಾಲ್ನಡಿಗೆ ಜಾಥಾ ಅಭೂತಪೂರ್ವ ಯಶಸ್ಸು ಕಂಡಿದೆ.
ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಹೊಸ ಮನ್ವಂತರ ಸೃಷ್ಟಿಯ ಬಳಿಕ ಇದೀಗ ಅರುಣ್ ಕುಮಾರ್ ಪುತ್ತಿಲ ಸಮಾಜಸೇವೆ ಮತ್ತು ಧರ್ಮ ಸೇವೆಯ ಉದ್ದೇಶದಿಂದ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಭಾನುವಾರ ಸಂಜೆ ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ಮಹಾಲಿಂಗೇಶ್ವರನ ಕಾಲ್ನಡಿಗೆ ಜಾಥಾ ನಡೆದಿದ್ದು, ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಗಿದೆ.

ನೆರೆದಿದ್ದ ಅಪಾರ ಸಂಖ್ಯೆಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, 20 ದಿನಗಳಲ್ಲಿ 62,000 ಮತ ಪಡೆದಿದ್ದೇವೆಂದರೆ ಅದು ದೇವದುರ್ಲಭ ಕಾರ್ಯಕರ್ತರು ಹಾಗೂ ಹಿರಿಯರ ಪರಿಶ್ರಮ ಆಗಿದೆ. ನೀವು ನಮ್ಮೆ ಮೇಲೆ ಇಟ್ಟಿರುವ ನಂಬಿಕೆಯನ್ನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ. ಹಾಗೆಯೆ ನನ್ನ ಮೇಲೆ ಬಂದಿರುವ ಎಲ್ಲಾ ಆರೋಪ, ಅಪಚಾರಗಳಿಗೆ ದೇವರು ಉತ್ತರ ಕೊಡುತ್ತಾನೆ ಎಂದರು.
ಕೊರಗಜ್ಜ, ಪಣೋಲಿಬೈಲಿನ ಕಲ್ಲುರ್ಟಿ, ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಅಪಚಾರ ಮಾಡುವವರನ್ನು ಇನ್ಮುಂದೆ ಸರಿ ದಾರಿಯಲ್ಲಿ ನಡೆಸಲಿ. ನಮ್ಮ ಹೋರಾಟ ಚುನಾವಣೆಗೆ ಸೀಮಿತ ಆಗುವುದಿಲ್ಲ. ಹಿಂದೂ ಸಮಾಜ ಶೋಷಣೆಗೆ ಒಳಗಾದವರ ಕಣ್ಣಿರೋರೆಸುವ ಕೆಲಸವನ್ನು ಸದಾ ಮಾಡುತ್ತೇವೆ. ಅದಕ್ಕಾಗಿ ಪುತ್ತಿಲ ಪರಿವಾರ ಅಸ್ತಿತ್ವಕ್ಕೆ ಬಂದಿದೆ. ಇದರ ಅಧ್ಯಕ್ಷರಾಗಿ ಅಶೋಕ್ ಮಾರ್ತಾ, ಕಾರ್ಯದರ್ಶಿಯಾಗಿ ಉಮೇಶ್ ಕೊಡಿಬೈಲು ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿದರು.
ಇನ್ನು ಪುತ್ತೂರಿನ ಪ್ರಸಿದ್ಧ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಕಾರ್ಯಕರ್ತರ ಒತ್ತಾಸೆಯಿಂದ ಅರುಣ್ ಅಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 62,000 ಮತಗಳು ಯಾರ ವಿರುದ್ಧವಾಗಿ ಬಿದ್ದ ಮತಗಳಲ್ಲ. ಅರುಣ್ ಅಣ್ಣನ ಪರವಾಗಿ ಬಿದ್ದ ಮತಗಳು. ಮುಂದೆಯೂ ಹಿಂದೂ ಸಮಾಜದ ಸಂಕಷ್ಟದ ಸಂದರ್ಭ, ಸಾಮಾಜಿಕ, ಧಾರ್ಮಿಕ ಕೆಲಸಗಳಿಗೆ ಈ ಪಡೆ ಕೆಲಸ ಮಾಡಲಿದ್ದು, ಇನ್ನಷ್ಟು ಬಲಿಷ್ಠವಾಗಿ ಮೂಡಿಬರಲಿ ಎಂದು ಆಶಿಸಿದ್ದಾರೆ.
ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಬರೀ ಚುನಾವಣೆಯಷ್ಟೇ ನಮ್ಮ ಗುರಿಯಲ್ಲ. ಚುನಾವಣೆಯ ಜೊತೆಗೆ ಸೇವಾ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಯಾವ ಕಾಲಕ್ಕೂ ಅಪಮಾನ ಆಗಬಾರದು ಎಂಬ ಜಾಗೃತಿಯೊಂದಿಗೆ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಈ ದಿನಮಾನದಲ್ಲಿ ಪುತ್ತಿಲ ಪರಿವಾರ ರಚನೆಗೊಂಡರೆ ಹೇಗೆ ಎಂಬ ಆಲೋಚನೆ ಮೂಡಿದೆ. ಇತಿಹಾಸ ನಿರ್ಮಿಸಿದ ಪುತ್ತೂರಿನಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಖಾಸಗಿ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮುಖಾಮುಖಿ ಆಗಿದ್ದಾರೆ. ಪುತ್ತಿಲ ಅವರ ಹಿಂದುತ್ವದ ವಿಚಾರಧಾರೆಯನ್ನು ಹೀಯಾಳಿಸಿದರೂ ಮನಸ್ಸಿನಲ್ಲಿರಿಸಲದೇ ಪುತ್ತಿಲ ಪ್ರಭಾಕರ್ ಭಟ್ ಅವರ ಪಾದಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಪುತ್ತಿಲ ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications