ಪುತ್ತೂರು; ಅಡಿಕೆಯಿಂದ ತಯಾರಾಯ್ತು ಘಮ ಘಮ ಹೋಳಿಗೆ!

ಮಂಗಳೂರು, ಆಗಸ್ಟ್ 06; ಕರಾವಳಿ ಕೃಷಿಕರ ಜೀವನಾಡಿಯಾಗಿರುವ ಅಡಿಕೆ ಕೃಷಿಗೆ ಈಗ ಭಾರೀ ಬೇಡಿಕೆ ಬಂದಿದೆ. ಅದರಲ್ಲೂ ಹೊರ ದೇಶಗಳಿಂದ ಕಳ್ಳಸಾಗಾಣಿಕೆ ಮೂಲಕ ಬರುತ್ತಿದ್ದ ಅಡಿಕೆ ದಂಧೆಗೆ ಕೇಂದ್ರ ಸರ್ಕಾರ ತಡೆಹಾಕುತ್ತಿದ್ದಂತೆಯೇ ಕರಾವಳಿ ಅಡಿಕೆಗೆ ಬೆಲೆ ದುಪ್ಪಟ್ಟಾಗಿದೆ. ‌ಇತಿಹಾಸದಲ್ಲಿ ಎಂದೂ ಕಾಣದ ರೀತಿ ಅಡಿಕೆ ದರ ಏರಿಕೆಯಾಗಿದೆ. ಇದರಿಂದ ಅಡಿಕೆ ಬೆಳೆಗಾರರೂ ಖುಷಿಯಾಗಿದ್ದು, ಅಡಿಕೆ ಬೆಳೆಯುವ ಕೃಷಿಕರ ಸಂಖ್ಯೆ ಕೂಡಾ ಹೆಚ್ಚಾಗಿದೆ.

ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರೈತರು ಅಡಿಕೆಯನ್ನೇ ಅತಿ ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಅಡಿಕೆಯಿಂದಲೇ ಜೀವನ ಕಂಡುಕೊಳ್ಳುವ ಕೃಷಿಕರಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಕೇಂದ್ರ ಸರ್ಕಾರದ ಮುಂದೆ ಕೆಲ ಸಂಶೋಧಕರು ಮುಂದಿಟ್ಟಾಗ ಅಡಿಕೆ ಕೃಷಿಕರು ಬೆಚ್ಚಿ ಬಿದ್ದಿದ್ದರು. ಆದರೆ ಕರಾವಳಿಯ ಜನಪ್ರತಿನಿಧಿಗಳ ಮೂಲಕ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುವುದನ್ನು ಕರಾವಳಿಯ ಕೃಷಿಕರು ಕೇಂದ್ರ ಸರ್ಕಾರಕ್ಕೆ ಮನವರಿಕೆಯನ್ನು ಮಾಡಿದ್ದರು. ಅನಂತರವಾಗಿ ಅಡಿಕೆಯಿಂದ ಚಹಾ ತಯಾರಿಸಬಹುದು ಎಂಬುವುದನ್ನು ಶಿವಮೊಗ್ಗದ ಯುವ ಉದ್ಯಮಿ ಸಾಬೀತುಗೊಳಿಸಿದ್ದರು..

ಇದಾದ ಬಳಿಕ ಅಡಿಕೆಗೆ ಶುಕ್ರದೆಸೆ ಆರಂಭವಾಗಿದ್ದು, ಅಡಿಕೆಯಿಂದ ತರಹೇವಾರಿ ತಿಂಡಿಗಳು ತಯಾರಾದವು. ಇದೀಗ ಅಡಿಕೆಯಿಂದ ಹೋಳಿಗೆ ತಯಾರಾಗಿದ್ದು, ತಿಂಡಿ ಪ್ರೀಯರ ಕುತೂಹಲಕ್ಕೆ ಕಾರಣವಾಗಿದೆ. ಅಡಿಕೆಯಿಂದ ಹೋಳಿಗೆನೂ ತಯಾರಿಸಬಹುದಾ? ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿದೆ.

 Arecanut Holige New Attempt At Dakshina Kannada Puttur

ಒಂದು ಕಡೆಯಲ್ಲಿ ಮಂಗಳೂರು ಚಾಲಿ ಅಡಿಕೆಗೆ ಮಾರುಕಟ್ಟೆಯಲ್ಲಿ ಭಾರೀ ಧಾರಣೆ ಸಿಗುವ ಮೂಲಕ ಕೊರೊನಾ ಸಂಕಷ್ಟದಲ್ಲೂ ಅಡಕೆ ಬೆಳೆದ ರೈತರು ಬಾಯಿ ಸಿಹಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಅಡಿಕೆಯನ್ನೇ ಬಳಸಿಕೊಂಡು ಬಾಯಿ ಸಿಹಿ ಮಾಡುವ ಸಂಶೋಧನೆ ಫಲ ಕೊಟ್ಟಿದೆ. ಅಡಿಕೆ ಹಾಗೂ ಕೊಕ್ಕೋ ಬಳಸಿ ಹೋಳಿಗೆ ಮಾಡಿರುವ ಪುತ್ತೂರಿನ ಯುವ ಪಾಕಶಾಸ್ತ್ರಜ್ಞರೊಬ್ಬರು ಶೀಘ್ರದಲ್ಲೇ ಅಡಿಕೆ ಹಾಗೂ ಕೊಕ್ಕೋದ ಹೋಳಿಗೆ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡ್ ಗ್ರಾಮದ ಉಜುರುಪಾದೆ ಸಮೀಪದ ಗುರಿಮೂಲೆ ನಿವಾಸಿಯಾಗಿರುವ ಶ್ರೀಕೃಷ್ಣ ಶಾಸ್ತ್ರಿ ಈ ಸಂಶೋಧನೆ ಮಾಡಿದ ಯುವ ಪಾಕಶಾಸ್ತ್ರಜ್ಞ. 10 ವರ್ಷಗಳಿಂದ ಪಾಕಶಾಸ್ತ್ರಜ್ಞರಾಗಿ ಪರಿಸರದಲ್ಲಿ ಹೆಸರುವಾಸಿಯಾಗಿರುವ ಇವರು ಇದೀಗ ಅಡಿಕೆ ಹಾಗೂ ಕೊಕ್ಕೋವನ್ನು ಬಳಸಿಕೊಂಡು ಹೋಳಿಗೆ ತಯಾರಿಸಿದ್ದಾರೆ. ಸ್ಯಾಂಪಲ್ ಗಾಗಿ ತಯಾರಿಸಿದ ಹೋಳಿಗೆಗೆ ಭಾರೀ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಅಡಿಕೆ ಹಾಗೂ ಕೊಕ್ಕೋವನ್ನು ಮೂಲವಸ್ತುವನ್ನಾಗಿ ಬಳಸಿಕೊಂಡು ಹೋಳಿಗೆ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾರೆ.

ವಿವಿಧ ತಿನುಸು ತಯಾರಿಕೆ; ಅಡಿಕೆ ಹಾಗೂ ಕೊಕ್ಕೋ ದಿಂದ ಲಡ್ಡು, ಚಾಕಲೇಟ್, ಪೇಯ, ಐಸ್‍ಕ್ರೀಂ ಮುಂತಾದ ತಿನಿಸುಗಳನ್ನು ಈಗಾಗಲೇ ತಯಾರಿಸಲಾಗಿದೆ. ಜೊತೆಗೆ ಅಡಕೆಯಿಂದ ಟೀ ಮಾಡಿ ಕುಡಿಯುವ ತನಕದ ಸಂಶೋಧನೆಗಳೂ ನಡೆದಿವೆ. ಇದೆಲ್ಲವನ್ನು ಕಂಡು ಸ್ಪೂರ್ತಿಗೊಂಡಿದ್ದ ಶ್ರೀಕೃಷ್ಣ ಅಡಿಕೆ ಹಾಗೂ ಕೊಕ್ಕೋ ಬಳಸಿ ಹೋಳಿಗೆ ಏಕೆ ತಯಾರಿಸಬಾರದು ಎನ್ನುವ ಪ್ರಶ್ನೆಯನ್ನು ತನ್ನಲ್ಲೇ ಹಾಕಿಕೊಂಡಿದ್ದಾರೆ. ಹೇಗೂ ಬಾಣಸಿಗನಾಗಿ ಹೋಳಿಗೆ ತಯಾರಿಯಲ್ಲಿ ನಿಪುಣನಾಗಿರುವ ಇವರು, ಇದನ್ನೇ ಅಡಕೆ ಹಾಗೂ ಕೊಕ್ಕೋದಿಂದ ತಯಾರಿಸಿದರೆ ಹೇಗೆ ಎಂದು ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದರು.

 Arecanut Holige New Attempt At Dakshina Kannada Puttur

ಮೊದಲು 250 ಗ್ರಾಂ ಡಬ್ಬಲ್ ಚೋಲ್ ಚಾಲಿ ಅಡಿಕೆಯನ್ನು ತುಪ್ಪದೊಂದಿಗೆ ಬೆರೆಸಿ ನುಣ್ಣಗೆ ಹುಡಿ ಮಾಡಿದ್ದಾರೆ. ಬಳಿಕ ಸಕ್ಕರೆ ಪಾಕಕ್ಕೆ ಸೇರಿಸಿ ಮೈದಾ ಮತ್ತಿತರ ಪೂರಕ ಸಾಮಗ್ರಿಗಳನ್ನು ಬಳಸಿ ಹೋಳಿಗೆ ತಯಾರಿಸಲಾಗಿದೆ. 250 ಗ್ರಾಂ ಅಡಕೆ ಮಿಶ್ರಣದಲ್ಲಿ 52 ಹೋಳಿಗೆ ತಯಾರಿಸಲು ಸಾಧ್ಯವಾಗಿದ್ದು, ಒಂದು ಕಿಲೋ ಅಡಕೆ ಬಳಸಿ ಸುಮಾರು 200 ಹೋಳಿಗೆ ತಯಾರಿಸಬಹುದು ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ಶ್ರೀ ಕೃಷ್ಣ ಶಾಸ್ತ್ರಿಗಳು.

ಮೊದಲು ತಯಾರಿಸಿದ 52 ಅಡಕೆ ಹೋಳಿಗೆಗಳನ್ನು ಪರಿಸರದಲ್ಲೇ ಹಂಚಲಾಗಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಡಬ್ಬಲ್ ಚೋಲ್ ಅಡಕೆಯನ್ನು ನುಣ್ಣಗೆ ಹುಡಿ ಮಾಡುವುದು ಸುಲಭವಲ್ಲ. ಪ್ರಯೋಗ ಸಂದರ್ಭ ಮಿಕ್ಸಿಯಲ್ಲಿ ಅರೆದು ನುಣ್ಣಗೆ ಮಾಡಲಾಗಿದೆ. ಸದ್ಯದಲ್ಲೇ ಇದಕ್ಕೊಂದು ಯಂತ್ರ ಖರೀದಿಸಿ ನಂತರ ಅಡಕೆ ಹಾಗೂ ಕೊಕ್ಕೋದ ಹೋಳಿಗೆ ತಯಾರಿಸುವ ಗೃಹೋದ್ಯಮ ಆರಂಭಿಸಲು ಶ್ರೀಕೃಷ್ಣ ಶಾಸ್ತ್ರಿ ನಿರ್ಧರಿಸಿದ್ದಾರೆ. ಅಡಿಕೆ ಹೋಳಿಗೆಗಾಗಿ ಶ್ರೀಕೃಷ್ಣ ಶಾಸ್ತ್ರಿ ತಮ್ಮ ತೋಟದಲ್ಲೇ ಬೆಳೆಯುವ ಅಡಕೆ ಬಳಸಿಕೊಳ್ಳುತ್ತಿದ್ದಾರೆ. ಕೊಕ್ಕೊ ಬೀಜವನ್ನು ಹೊರಗಿನಿಂದ ಖರೀದಿಸಲು ಮುಂದಾಗಿದ್ದು, ಪ್ರಸ್ತುತ ಅಡಿಕೆಗೆ ಉತ್ತಮ ಧಾರಣೆಯಿದೆ.

"ಮೌಲ್ಯವರ್ಧಿತ ಉತ್ಪನ್ನಗಳು ಹೆಚ್ಚು ಹೆಚ್ಚು ಬಂದಂತೆಲ್ಲ ಅಡಿಕೆ ಧಾರಣೆಗೆ ಉತ್ತೇಜನ ನೀಡಿದಂತಾಗುತ್ತದೆ" ಎನ್ನುತ್ತಾರೆ ಶ್ರೀಕೃಷ್ಣ ಶಾಸ್ತ್ರಿಯವರು..
ಒಟ್ಟಿನಲ್ಲಿ ಕರಾವಳಿ ಕೃಷಿಕರ ಜೀವನಾಡಿ ಅಡಿಕೆ ಕೃಷಿಗೆ ಈ ಹೋಳಿಗೆ ಯಿಂದ ಮತ್ತಷ್ಟು ಹುರುಪು ಬಂದಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುವುದು ಮತ್ತೆ ರುಜುವಾತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+